

ಕಳಸ: ಕಳಸ ಶ್ರೀ ಕಲಶೇಶ್ವರ ಸ್ವಾಮಿ ಭಕ್ತರ ಆರಾಧ್ಯ ದೇವರು. ಪ್ರತಿ ನಿತ್ಯ ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಮಾಡಿ ಪ್ರಸಾದ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿಗೆ ಬರುವ ಭಕ್ತರು ದೇವರಲ್ಲಿ ನಾನಾ ರೀತಿಯ ಬೇಡಿಕೆ ಇಡುತ್ತಾರೆ. ಇಲ್ಲೊಬ್ಬ ಭಕ್ತ ನಾನು ಜಗತ್ತಿನ ಸರ್ವಾಂಗ ಸುಂದರನೆಂಬ ಖ್ಯಾತಿ ಗಳಿಸಬೇಕು ಎಂದು ಗಿರಿಜಾ ದೇವಿಯನ್ನು ಪ್ರಾರ್ಥಿಸಿ ಪತ್ರವನ್ನು ಕಾಣಿಕೆ ಹುಂಡಿಗೆ ಹಾಕಿದ್ದಾನೆ.
ಗುರುವಾರ ಕಲಶೇಶ್ವರ ದೇವರು ಹಾಗೂ ಪರಿವಾರ ದೇವರ ಕಾಣಿಕೆ ಹುಂಡಿ ಹಣ ಎಣಿಕೆ ನಡೆಯುವಾಗ ಪತ್ರ ಸಿಕ್ಕಿದೆ. ಸರ್ವಾಂಗ ಸುಂದರಿಯಾದ ಗಿರಿಜಾ ದೇವಿಯ ಆಶೀರ್ವಾದ ಬಯಸುತ್ತಿದ್ದೇನೆ. ನಾನು ಒಬ್ಬ ಉತ್ತಮ ನಟ-ಫ್ಯಾಷನ್ ಮಾಡೆಲ್ ಆಗಬೇಕೆಂದು ಇಚ್ಛಿಸಿದ್ದೇನೆ. ಈ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು ಎಂದು ಈ ಪತ್ರದ ಮೂಲಕ ನಿಮ್ಮ ಆಶೀರ್ವಾದ ಬೇಡುತ್ತಿದ್ದೇನೆ. ನನ್ನ ಸೌಂದರ್ಯದ ಹೊಣೆ ನಿಮ್ಮದು. ಪ್ರಪಂಚದಲ್ಲಿ ಸರ್ವಾಂಗ ಸುಂದರನೆಂಬ ಪ್ರಖ್ಯಾತಿಯಾಗಬೇಕು. ಇದು ನಿಮ್ಮ ಭಕ್ತನ ಬೇಡಿಕೆ ಎಂದು ಪತ್ರದಲ್ಲಿ ಬರೆದಿದ್ದಾನೆ.
ಇನ್ನೊಬ್ಬ ಭಕ್ತ ಕುಟುಂಬಸ್ಥರ ವಿರುದ್ಧವೇ ಪತ್ರ ಬರೆದು ಹಾಕಿದ್ದಾನೆ. ನನ್ನ ಜೀವನವನ್ನು ನಾಶ ಮಾಡುತ್ತಿರುವ ನನ್ನ ಮನೆಯ ಯಾರನ್ನೂ ಉಳಿಸಬೇಡ ಎಂದು ಪತ್ರದಲ್ಲಿ ಬರೆದಿದ್ದಾನೆ. ಮತ್ತೊಬ್ಬ ಭಕ್ತ 2000 ರೂ. ಮಾದರಿಯ ಜೆರಾಕ್ಸ್ ನೋಟು ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾನೆ.