ಕೋವಿಡ್ ನಿಂದ ಚೇತರಿಸಿಕೊಂಡವರಿಗೆ ಗೋವಾ ವೈದ್ಯ ಬೀಳ್ಕೊಡುವ ರೀತಿ ಇದು!

edwin gomes
Published on

ಪಣಜಿ: ಕರೊನಾ ಸೋಂಕಿಗೆ ತುತ್ತಾದರೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ, ದೊರೆತರೂ ವೈದ್ಯರು ಮತ್ತು ಶುಶ್ರೂಷಕರು ಇರುವುದಿಲ್ಲ. ಇದ್ದರೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪಗಳ ನಡುವೆ ಗೋವಾದಲ್ಲಿ ಕೋವಿಡ್​ನಿಂದ ಗುಣಮುಖರಾದವರನ್ನು ವೈದ್ಯರು ಅಪ್ಪಿಕೊಂಡು ಆತ್ಮೀಯವಾಗಿ ಬೀಳ್ಕೊಡುಗೆ ನೀಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಗೋವಾ ವೈದ್ಯಕೀಯ ಕಾಲೇಜಿನ ಡಾ. ಎಡ್ವಿನ್​ ಗೋಮ್ಸ್​ ಈ ರೀತಿ ಬೀಳ್ಕೊಡುತ್ತಿರುವ ವೈದ್ಯರಾಗಿದ್ದಾರೆ. ಇವರು ಮಾರ್ಗೋವಾದ ಇಎಸ್​ಐ ಆಸ್ಪತ್ರೆಯಲ್ಲಿ ಕೋವಿಡ್​ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಇವರು ಸಾಕಷ್ಟು ರೋಗಿಗಳನ್ನು ಉಪಚರಿಸಿದ್ದಾರೆ. ಈ ಉಪಚಾರದಿಂದ 190ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು ಅವರೆಲ್ಲರನ್ನೂ ಆತ್ಮೀಯವಾಗಿ ತಬ್ಬಿಕೊಂಡು ಇವರು ಬೀಳ್ಕೊಟ್ಟಿದ್ದಾರೆ.

98 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ನೀಡಿ ಇದೀಗ ಮನೆಗೆ ಮರಳಿರುವ ಡಾ. ಗೋಮ್ಸ್, ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್​ ಬಂದು ಗುಣಮುಖರಾದ ಎಲ್ಲರನ್ನೂ ನಾನು ತಬ್ಬಿಕೊಂಡು ಬೀಳ್ಕೊಟ್ಟಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಗುಣಮುಖರಾದವರೆಲ್ಲರನ್ನೂ ಕೋವಿಡ್​ ಏಂಜೆಲ್ಸ್​ ಎಂದು ಸಂಬೋಧಿಸುವ ಇವರು, ಗುಣಮುಖರಾಗಿ ಮನೆಗೆ ಮರಳುತ್ತಿರುವವರನ್ನು ತಬ್ಬಿಕೊಂಡು ಬೀಳ್ಕೊಡುವ ಮೂಲಕ ಅನಗತ್ಯವಾಗಿ ಇವರನ್ನು ದೂರ ಇರಿಸಬೇಡಿ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಉಸಿರಾಟದ ಸಮಸ್ಯೆಯ ಆರಂಭಿಕ ಘಟ್ಟದಲ್ಲೇ ಚಿಕಿತ್ಸೆ ಪಡೆದುಕೊಂಡರೆ ಸೋಂಕಿತರು ಬೇಗನೆ ಗುಣಮುಖರಾಗುತ್ತಾರೆ. ಉಸಿರಾಟ ಸಾಧ್ಯವೇ ಇಲ್ಲ ಎಂಬ ಸ್ಥಿತಿ ತಲುಪಿದರೆ ಅವರನ್ನು ಉಳಿಸುವುದು ತುಂಬಾ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ಒಬ್ಬ ಸೋಂಕಿತರು ಸಂಪೂರ್ಣ ಗುಣಮುಖರಾದ ಬಳಿಕ ಆಸ್ಪತ್ರೆಯಲ್ಲೇ ಉಳಿದು ಉಳಿದ ರೋಗಿಗಳ ಚಿಕಿತ್ಸೆಗೆ ಸಹಕರಿಸಿದ್ದನ್ನು ಆತ್ಮೀಯವಾಗಿ ನೆನಪು ಮಾಡಿಕೊಂಡಿದ್ದಾರೆ.

ವಾಸ್ಕೋದ ಮ್ಯಾಂಗೋರ್​ ಹಿಲ್​ನ ನಿವಾಸಿ ಕರೋನ ಸೋಂಕಿಗೆ ಒಳಗಾಗಿದ್ದರು. ಸಂಪೂರ್ಣ ಗುಣಮುಖರಾದ ಬಳಿಕ ಅವರು ಅದೇ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತದ್ದ ಇತರೆ ರೋಗಿಗಳಿಗೆ ಊಟ-ತಿಂಡಿ ಕೊಡುವುದು, ಬೆಳಗ್ಗೆ ಪ್ಯಾನ್​ ಕೊಡುವ ಕೆಲಸವನ್ನು ಮಾಡಿದರು. ಒಬ್ಬ ಶುಶ್ರೂಷಕರಂತೆ ಅವರು ಕೆಲಸ ಮಾಡಿದರು. ಬೇರೆ ರೋಗಿಗಳನ್ನು ಸಮಾಧಾನಪಡಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net