

ಪಡುಬಿದ್ರಿ: ಅದಾನಿ ಸಮೂಹದ ಸ್ಥಾಪಕ ಗೌತಮ್ ಅದಾನಿ ಅವರ ಜನ್ಮದಿನ ಪ್ರಯುಕ್ತ ಪ್ರತಿ ವರ್ಷ ಜೂ.24ರಂದು ಅದಾನಿ ಪ್ರತಿಷ್ಠಾನದ ಮೂಲಕ ದೇಶದೆಲ್ಲೆಡೆ ಅದಾನಿ ಸಮೂಹದ ಸಂಸ್ಥೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ. ಶಿಬಿರದಲ್ಲಿ ಸಂಗ್ರಹವಾಗುವ ಸಾವಿರಾರು ಯುನಿಟ್ ರಕ್ತವನ್ನು ಆಯಾ ಪ್ರದೇಶದ ರಕ್ತನಿಧಿ ಕೇಂದ್ರಗಳಿಗೆ ನೀಡುತ್ತಿದೆ. ಇದರಿಂದ ಅನೇಕ ಜನರಿಗೆ ಉಪಯುಕ್ತವಾಗಿದ್ದು, ಇದೊಂದು ಉತ್ತಮ ಸಮಾಜ ಸೇವೆಯಾಗಿ ಮುಂದುವರಿಯುತ್ತಿದೆ ಎಂದು ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್ ಉಡುಪಿ ಟಿಪಿಪಿ ಸ್ಥಾವರದಲ್ಲಿ ಗೋ ರೆಡ್ ಶೀರ್ಷಿಕೆಯಡಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥೆ ಡಾ.ವೀಣಾಕುಮಾರಿ ಮಾತನಾಡಿ, ಅದಾನಿ ಸಮೂಹದ ಎಲ್ಲ ಉದ್ಯೋಗಿಗಳು ಸ್ವಇಚ್ಛೆಯಿಂದ ರಕ್ತದಾನ ಮಾಡುತ್ತಾ ಉಡುಪಿ ಮತ್ತು ಮಂಗಳೂರು ಜಿಲ್ಲಾ ಆಸ್ಪತ್ರೆಗಳ ರಕ್ತನಿಧಿಗೆ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅದಾನಿ ಸಂಸ್ಥೆಯ ಪ್ರತಿ ಶಿಬಿರವು ಗ್ರಾಮಸ್ಥರಿಗೆ ಒಂದು ವರದಾನವಾಗಿದೆ ಎಂದರು. ಶಿಬಿರದಲ್ಲಿ ಒಟ್ಟು 324 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.