

ಬೀರೂರು: ಮಕ್ಕಳ ಬದುಕಲ್ಲಿ ಕಲಿಕೆ ಜತೆಗೆ ಕ್ರೀಡೆಯೂ ಮುಖ್ಯ. ಇದರಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಹೆಚ್ಚಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ತಿಳಿಸಿದರು.
ಬೀರೂರಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ನಡೆದ ಬೀರೂರು ಪಟ್ಟಣ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಿಸಲು ಇಂತಹ ಕ್ರೀಡಾಕೂಟಗಳ ಅವಶ್ಯಕ. ಪಾಲಕರು ಮತ್ತು ಶಿಕ್ಷಕರು ಕೇವಲ ಅಂಕಗಳಿಕೆಯಲ್ಲಿ ಮಕ್ಕಳನ್ನು ತೊಡಗಿಸಬಾರದು. ಬದಲಾಗಿ ಎಲ್ಲ ಚಟುವಟಿಕೆಗಳಲ್ಲೂ ಮಕ್ಕಳು ಭಾಗವಹಿಸುವ ಆಸಕ್ತಿ ವಹಿಸಬೇಕು. ಸೋಲು ಗೆಲುವು ಮುಖ್ಯವಲ್ಲ ಮಕ್ಕಳ ಭಾಗವಹಿಸುವಿಕೆ ಮುಖ್ಯ ಎಂದರು.
ಪುರಸಭೆ ಸದಸ್ಯೆ ಜ್ಯೋತಿ ಸಂತೋಷ್ ಕುಮಾರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ, ಮುಖ್ಯಶಿಕ್ಷಕ ಹನುಮಂತಪ್ಪ, ಪುರಸಭೆ ಸದಸ್ಯೆ ಜ್ಯೋತಿ ವೆಂಕಟೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಯದೇವಪ್ಪ, ಜೆಸಿ ಸಂಸ್ಥೆ ಅಧ್ಯಕ್ಷ ಅಯೂಬ್ ಅಹಮದ್, ಮಾರ್ಗದ ಮಧು, ಬಾವಿಮನೆ ಮಧು ಇದ್ದರು.