

ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳಿಸಿದರೆ ಸಾಲದು, ತಾಂತ್ರಿಕ ಕೌಶಲಗಳನ್ನು ಕಲಿಯಬೇಕು ಎಂದು ಮುಂಬೈನ ಅಲಿ ಯಾವರ್ ಜಂಗ್ ರಾಷ್ಟ್ರೀಯ ವಾಕ್ ಮತ್ತು ಶ್ರವಣ ದೋಷಗಳ ಸಂಸ್ಥೆಯ ನಿರ್ದೇಶಕ ಡಾ.ಸುಮನ್‌ಕುಮಾರ್ ಸಲಹೆ ನೀಡಿದರು.
ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪದವಿ ಗಳಿಸಿದ್ದೇನೆ ಎಂದು ಸಂಭ್ರಮ ಪಡುವುದಕ್ಕಿಂತ, ಜವಾಬ್ದಾರಿ ಹೊತ್ತು ಸಮಾಜಕ್ಕೆ ನಿಮ್ಮ ಕೊಡುಗೆ ನೀಡಬೇಕು. ಓದುವಾಗ ಗುರಿ ಹಾಗೂ ಛಲದಿಂದ ಓದಬೇಕು. ಮತ್ತೆ ಓದುವ ವಯಸ್ಸು ವಾಪಸ್ ಬರುವುದಿಲ್ಲ. ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಕೇವಲ ಅಂಕ ಗಳಿಸಿದರೆ ಸಾಲದು. ವೃತ್ತಿಗೆ ಬೇಕಾದ ತಾಂತ್ರಿಕ ಕೌಶಲ ಪಡೆಯುವುದು ಅತಿ ಮುಖ್ಯವಾಗಿದೆ. ಹಾಗಾಗಿ ಓದಿನ ಜತೆಗೆ ವೃತ್ತಿ ನೈಪುಣ್ಯತೆ ಪಡೆಯುವುದು ಅಗತ್ಯ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಸಕ್ತಿ ಕೊಡುವುದರ ಬದಲು, ಪುಸ್ತಕಗಳು ಹಾಗೂ ಅಧ್ಯಯನದ ಕಡೆ ಗಮನಹರಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಭವಿಷ್ಯ ರೂಪಿಸಿಕೊಳ್ಳಲು ಶ್ರಮಪಟ್ಟು ಅಧ್ಯಯನ ಮಾಡಬೇಕು. ವೈದ್ಯಕೀಯ ಶಿಕ್ಷಣ ಮುಗಿಸಿ, ವೈದ್ಯರಾಗುವವರು ಸಮಾಜವನ್ನು ಆರೋಗ್ಯವಾಗಿಡಬೇಕು. ರೋಗಿಗಳ ಮುಖದಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಹೆಚ್ಚಿನ ಸಂಶೋಧನೆಗಳ ಮೂಲಕ ಸಮಾಜಕ್ಕೆ ವೈದ್ಯಕೀಯ ಬಲ ನೀಡಬೇಕು ಎಂದು ಸಲಹೆ ನೀಡಿದರು.
39 ಪದವೀಧರ ವಿದ್ಯಾರ್ಥಿಗಳು ಮತ್ತು 33 ಸ್ನಾತಕೋತ್ತರ ಪದವೀಧರರು ಸೇರಿದಂತೆ ಒಟ್ಟು 72 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸಿ.ಎಂ.ಶ್ವೇತಾ, ಜಿ.ಯಶಸ್ವಿನಿ, ಡಿ.ಎಂ.ಶ್ರೀನಿಧಿ ಅವರಿಗೆ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರಶಸ್ತಿ ಹಾಗೂ ವಿ.ಎಸ್.ಹರ್ಷಿತಾ, ನೀಲಾ ಪಾಂಚಾಲಿ ಅವರಿಗೆ ಹೆಚ್ಚುವರಿ ಅತ್ಯುತ್ತಮ ವಿದ್ಯಾರ್ಥಿ ಕ್ಲಿನಿಷಿಯನ್ ಪ್ರಶಸ್ತಿಗಳನ್ನುನೀಡಿ ಗೌರವಿಸಲಾಯಿತು.
ಚಿಕಿತ್ಸೆಯ ಪರಿಣಾಮಕಾರಿತ್ವದಲ್ಲಿ ಸಂಶೋಧನೆಯನ್ನು ಉತ್ತೇಜಿಸುವ ಹೆಗ್ಡೆ ಫೌಂಡೇಷನ್ ಚಿನ್ನದ ಪದಕವನ್ನು ಡಾ.ಆರ್.ಸುಮಾ ಮತ್ತು ಡಾ.ಎಸ್.ವಿ.ನರಸಿಂಹನ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸ್ನಾತಕೋತ್ತರ ಪ್ರಬಂಧಕ್ಕಾಗಿ ಎಲ್.ಐಶ್ವರ್ಯಾ ಮತ್ತು ಆರ್.ಮಹಾನ್ಯ ಅವರಿಗೆ ನೀಡಿ ಅಭಿನಂದಿಸಲಾಯಿತು.
ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರ ಮಠ, ವಿಭಾಗದ ಮೋನಿಕಾ ರತ್ನಮಾಲಾ ಇತರರು ಇದ್ದರು.