ರಬಕವಿ-ಬನಹಟ್ಟಿ: ಸಮಯವನ್ನು ಯಾರು ಗೌರವಿಸುತ್ತಾರೋ ಅಂತವರು ಜಗತ್ತನ್ನು ಗೆಲ್ಲಬಲ್ಲರು ಎಂದು ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದ ಕೆಪಿಎಸ್ ಕಾಲೇಜು ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣವೆಂಬುದು ಬದುಕನ್ನು ನಿರ್ಮಿಸುವ ಅಡಿಪಾಯ. ವಿದ್ಯಾರ್ಥಿಗಳು ತಂದೆ ತಾಯಿ ಹಾಗೂ ಗುರುಗಳನ್ನು ಗೌರವಿಸುವ ಮೂಲಕ ಉತ್ತಮ ನಾಗರಿಕರಾಗಬೇಕು. ಭಾಷೆ ಮೇಲೆ ಪ್ರಭುತ್ವ ಸಾಧಿಸಿದರೆ ಜಗತ್ತನ್ನೇ ಗೆಲ್ಲಬಹುದು ಎಂದರು.
ಪ್ರಾಚಾರ್ಯ ಶರತ್‌ಚಂದ್ರ ಜಂಬಗಿ ಮಾತನಾಡಿ, ಇತರ ಭಾಷೆಗಳ ಬಗ್ಗೆ ವ್ಯಾಮೋಹ ಬದಲಾಗಿ ಪ್ರೀತಿ ಇರಲಿ. ವಿದ್ಯಾರ್ಥಿಗಳಿಗೆ ಪರಿಸರ, ವೈಜ್ಞಾನಿಕ ಶಿಕ್ಷಣ, ಭಾಷೆ ಬಗ್ಗೆ ಅರಿವಿದ್ದರೆ ಜೀವನದಲ್ಲಿ ಯಶಸ್ವಿಯಾಗಬಹುದು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಮಹತ್ವ ನೀಡಬೇಕು ಎಂದರು.
ಇತಿಹಾಸ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾವಿತ್ರಿ ಭಜಂತ್ರಿ, ಬಿ.ಜಿ. ಮೆಟಗುಡ್ಡ, ಬಿ. ಬಿ. ಕುಂಬಾರ, ಎಂ.ಸಿ. ನರೇಗಲ್ಲ, ಉಪ ಪ್ರಾಚಾರ್ಯ ರೇಖಾ ಕದಂ, ನಿವೃತ್ತ ಶಿಕ್ಷಕ ಬಿ.ಎಸ್. ಬುಟ್ಟನ್ನವರ, ಕೆಪಿಎಸ್ ಉಪಾಧ್ಯಕ್ಷ ಬಸವರಾಜ ಗಣಿ, ಗಂಗಪ್ಪ ಅಮ್ಮಲಜೇರಿ, ಹನುಮಂತ ಮಗದುಮ, ವಿಠ್ಠಲ ಜನವಾಡ, ಮಲ್ಲಪ್ಪ ಮುಗಳಖೋಡ, ಮಹಾದೇವ ಸಿದ್ದಾಪುರ, ಎಂ.ಎಸ್. ಲೋಕುರ, ಶ್ರೀಶೈಲ ಗಣಿ, ಕಾಡೇಶ ಕಂಪು, ಜಿ.ಎಸ್. ಮಾಳಗೆ, ಐ.ಪಿ. ಬಾವಲತ್ತಿ, ಎಲ್.ಎಲ್. ಶಿಲ್ಲೆದಾರ, ರೋಹಿಣಿ ಪತ್ತಾರ ಮತ್ತಿತರರಿದ್ದರು.