10 ಕೆಜಿ ಅಕ್ಕಿ ಕೊಡಿ ಇಲ್ಲವಾದ್ರೆ ದುಡ್ಡು ನೀಡಿ; ಬಿ.ವೈ.ರಾಘವೇಂದ್ರ

b.y.raghavendra
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ
Published on

ಶಿವಮೊಗ್ಗ: ರಾಜ್ಯ ಸರ್ಕಾರ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಡಿತರದಾರರಿಗೆ 10 ಕೆಜಿ ಅಕ್ಕಿ ಕೊಡಬೇಕು. ಇಲ್ಲವಾದರೆ ಅದರ ಸಂಪೂರ್ಣ ಹಣವನ್ನು ನೀಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.

ಕೇಂದ್ರ ಸರ್ಕಾರ ಹಾಲಿ ಪಡಿತರದಾರರಿಗೆ ಐದು ಕೆಜಿ ಅಕ್ಕಿ ನೀಡುತ್ತಿದೆ. ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ನುಡಿದಂತೆ ಅವರು ಕೇಂದ್ರದ 5 ಕೆಜಿ ಸೇರಿ ಒಟ್ಟಾರೆ 15 ಕೆಜಿ ಅಕ್ಕಿಯನ್ನು ಪ್ರತಿಯೊಬ್ಬರಿಗೂ ನೀಡಬೇಕು. ಆದರೆ 5 ಕೆಜಿ ಅಕ್ಕಿಯ ಬದಲು ಹಣ ನೀಡುವುದಾಗಿ ಮಾತ್ರ ಹೇಳುತ್ತಿದ್ದು, ನುಡಿದ ಮಾತಿಗೆ ತಪ್ಪುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ವಾರದ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ಅವರು ಹಣ ಕೊಟ್ಟರೆ ಹೊಟ್ಟೆ ತುಂಬುತ್ತದಾ ಎಂದು ಪ್ರಶ್ನೆ ಮಾಡಿದ್ದರು. ಈಗ 5 ಕೆಜಿ ಬದಲಿಗೆ ಹಣ ನೀಡುತ್ತೇವೆಂದು ಹೇಳಿದ್ದಾರೆ. ಅಕ್ಕಿ ಕೊಡುವುದಕ್ಕೆ ಆಗದವರು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ ಜನರ ದಾರಿಯನ್ನು ಏಕೆ ತಪ್ಪಿಸಬೇಕಿತ್ತು ಎಂದು ಪ್ರಶ್ನಿಸಿದರು. ಲೋಕಸಭೆ ಚುನಾವಣೆಯೊಳಗೆ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಸರ್ಕಸ್ ಮಾಡುತ್ತಿದೆ. ಹಾಗಾಗಿ ಈ ಐದೂ ಗ್ಯಾರಂಟಿಗಳು ಲೋಕಸಭೆ ಚುನಾವಣೆವರೆಗೂ ಮಾತ್ರ ಇರಲಿವೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕೇವಲ ಮತಕ್ಕಾಗಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿ ಈಗ ಕೇಂದ್ರದತ್ತ ಬೆರಳು ಮಾಡುತ್ತಿದೆ. ಹಣ ನೀಡಲು ಪಡಿತರದಾರರ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಅದಕ್ಕೆ ಕನಿಷ್ಠ ಒಂದು ತಿಂಗಳಾದರೂ ಬೇಕು. ಹಾಗಾಗಿ ಅಕ್ಕಿ ಬದಲು ಹಣ ಕೊಡುವ ಯೋಜನೆಯೂ ವಿಫಲಗೊಳ್ಳುವ ಸಾಧ್ಯತೆ ಇದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರ ವರ್ತನೆ ನೋಡಿದರೆ ಅನುಮಾನ ಹೆಚ್ಚಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net