

ಉತ್ತರ ಪ್ರದೇಶ: ಕಾಲುವೆಗೆ ಬಿದ್ದು ಪ್ರಾಣ ಬಿಟ್ಟಿದ್ದ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡುವ ವೇಳೆ, ಶವ ಎದ್ದು ಕುಳಿತಿರುವ ಘಟನೆ ಮಿರ್ಜಾಪುರದಲ್ಲಿ ನಡೆದಿದೆ.
ಕಾಲುವೆಗೆ ಬಿದ್ದು ಬಾಲಕಿ ಸತ್ತಿದ್ದಾಳೆ ಎಂದು ಭಾವಿಸಿದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಹೃದಯ ಬಡಿತವನ್ನು ಪರೀಕ್ಷಿಸಿದ ವೈದ್ಯರು ಮೊದಲು ಆಘಾತಕ್ಕೊಳಗಾದರು. ಹುಡುಗಿಯ ಹೃದಯ ಬಡಿತವನ್ನು ಗಮನಿಸಲಾಯಿತು. ಅಷ್ಟರಲ್ಲಿ ಹುಡುಗಿ ಕಣ್ಣು ತೆರೆದಳು. ಆ ವೈದ್ಯರು ಒಂದು ಕ್ಷಣ ಆಶ್ಚರ್ಯಚಕಿತರಾದರು.
ಆದರೆ, ಬಾಲಕಿ ಮೃತಪಟ್ಟಿಲ್ಲ ಎಂದು ತಿಳಿದ ವೈದ್ಯರು ಆಕೆ ಪ್ರಜ್ಞಾಹೀನಳಾಗಿರುವುದನ್ನು ದೃಢಪಡಿಸಿ ತಕ್ಷಣ ತುರ್ತು ಚಿಕಿತ್ಸೆ ಆರಂಭಿಸಿದ್ದಾರೆ. ನುಂಗಿದ ನೀರನ್ನು ಹೊಟ್ಟೆಯನ್ನು ಒತ್ತುವ ಮೂಲಕ ಹೊರತೆಗೆದು ಚಿಕಿತ್ಸೆ ನೀಡಲಾಯಿತು. ಸ್ವಲ್ಪ ಸಮಯದಲ್ಲೇ ಪೂರ್ಣ ಪ್ರಜ್ಞೆ ಬಂದ ಬಾಲಕಿಯ ಮಾನಸಿಕ ಸ್ಥಿತಿಯನ್ನೂ ವೈದ್ಯರು ಪರೀಕ್ಷಿಸಿದ್ದಾರೆ. ತನ್ನ ಹೆಸರು, ತಂದೆಯ ಹೆಸರು, ಊರಿನ ಹೆಸರು... ಹೀಗೆ ವೈದ್ಯರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ತಾನು ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದಾಳೆ.