ಡಿಸಿ​ ಆದ ಗುಜರಾತ್​ ಬಾಲಕಿ! ಬರ್ತ್​ಡೇ ವಿಶ್​ಗೆ ಜಿಲ್ಲಾಧಿಕಾರಿ ಮೊಹರು!

flora
Published on

ಅಹಮದಾಬಾದ್​: ಬ್ರೈನ್ ಟ್ಯೂಮರ್​ನಿಂದ ಬಳಲುತ್ತಿರುವ 11 ವರ್ಷದ ಬಾಲಕಿಯ ಐಎಎಸ್​ ಅಧಿಕಾರಿಯಾಗುವ ಆಸೆಯನ್ನು ಗುಜರಾತಿನ ಅಹಮದಾಬಾದ್​ನ ಜಿಲ್ಲಾಧಿಕಾರಿ ಸಂದೀಪ್ ಸಗಳೆ ಈಡೇರಿಸಿದ್ದಾರೆ. ಗಾಂಧಿನಗರದ ನಿವಾಸಿ ಫ್ಲೋರಾ ಅಸೋಡಿಯ, ಒಂದು ದಿನದ ಮಟ್ಟಿಗೆ ಅಹಮದಾಬಾದ್​​ನ ಕಲೆಕ್ಟರ್​ ಆಗಿ ಉನ್ನತ ಹುದ್ದೆಯ ಕುರ್ಚಿಯ ಮೇಲೆ ಕೂತು ಸಂತೋಷ ಪಟ್ಟಿದ್ದಾಳೆ.

ಗಾಂಧಿನಗರದ ನಿವಾಸಿಯಾದ ಫ್ಲೋರಾ, ಓದಿನಲ್ಲಿ ಮುಂದಿದ್ದು, ಬೆಳೆದು ಐಎಎಸ್​ ಅಧಿಕಾರಿ ಅಥವಾ ಕಲೆಕ್ಟರ್​ ಆಗುವ ಹೆಬ್ಬಯಕೆ ಹೊಂದಿದ್ದಾಳೆ. ಈಗ್ಗೆ 7 ತಿಂಗಳ ಹಿಂದೆ ಆಕೆಗೆ ಬ್ರೈನ್ ಟ್ಯೂಮರ್​ ಇರುವುದು ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಅವಳ ಶುಶ್ರೂಷೆ ನಡೆಸುತ್ತಿದ್ದಾರೆ. ಈ ನಡುವೆ ಮೇಕ್​ ಎ ವಿಶ್​ ಫೌಂಡೇಶನ್​ನವರು ಮಾಡಿದ ಮನವಿಯ ಮೇರೆಗೆ ಆಕೆಗೆ ಶನಿವಾರ(ಸೆ.18)ದಂದು ಕಲೆಕ್ಟರ್​ ಆಗುವ ಅವಕಾಶ ನೀಡಲಾಯಿತು ಎನ್ನಲಾಗಿದೆ.

ಸೆಪ್ಟೆಂಬರ್ 25 ಕ್ಕೆ ಫ್ಲೋರಾಳ ಹುಟ್ಟಿದಹಬ್ಬ ಬರುತ್ತಿದ್ದು, ಈ ಸಂದರ್ಭಕ್ಕೆ ಅವಳ ಬಯಕೆಯನ್ನು ಈಡೇರಿಸಲಾಯಿತು. ಜೊತೆಗೆ, ಜಿಲ್ಲಾಧಿಕಾರಿಗಳು ಮತ್ತು ಕಛೇರಿಯ ಸಿಬ್ಬಂದಿ ಅವಳಿಗೆ ಹಲವು ಉಡುಗೊರೆಗಳನ್ನು ನೀಡಿ, ಮುಂಚಿತವಾಗಿಯೇ ಬರ್ತ್​ಡೇ ಆಚರಣೆ ಮಾಡಿದರು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net