

ಶ್ರೀನಗರ: ಸದಾ ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಇದೀಗ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ. ಮೋದಿ ಪ್ರಧಾನಿ ಸ್ಥಾನಕ್ಕೇರಿದರೂ ತಮ್ಮ ಬೇರನ್ನು ಮರೆತಿಲ್ಲ ಎಂದು ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಭಾನುವಾರದಂದು ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಿ ಗುಲಾಮ್ ನಬಿ ಅವರು ಮೋದಿಯನ್ನು ಹೊಗಳಿದ್ದಾರೆ. ನಾನು ಸಾಕಷ್ಟು ನಾಯಕರ ಕೆಲ ಒಳ್ಳೆ ಗುಣಗಳನ್ನು ಮೆಚ್ಚಿಕೊಳ್ಳುತ್ತೇನೆ. ನಾನು ಒಂದು ಹಳ್ಳಿಯಿಂದ ಬಂದವನು ಮತ್ತು ನನಗೆ ಅದರ ಬಗ್ಗೆ ಹೆಮ್ಮೆಯಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಹಳ್ಳಿಯಿಂದಲೇ ಬಂದವರು ಮತ್ತು ಅವರು ಟೀ ಮಾರಿಕೊಂಡು ಜೀವನ ನಡೆಸಿದವರು. ನಾವು ರಾಜಕೀಯವಾಗಿ ವಿರೋಧಿಗಳಿರಬಹುದು ಆದರೆ ಅವರು ತಮ್ಮ ಬೇರನ್ನು ಮರೆಯದಿರುವುದು ಬಗ್ಗೆ ನಾನು ಅವರನ್ನು ಪ್ರಶಂಶಿಸಲೇಬೇಕು. ಅವರು ಈಗಲೂ ಹೆಮ್ಮೆಯ ಚಾಯ್ವಾಲ ಎನಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ಗುಲಾಮ್ ನಬಿ ಅವರು ಈ ತಿಂಗಳ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾಗಿ ಅವರಿಗೆ ಬೀಳ್ಕೊಟ್ಟಿದ್ದರು. ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದರು. ಗುಲಾಮ್ ನಬಿ ಅವರೂ ಭಾವನಾತ್ಮಕವಾಗಿ ಮಾತನಾಡಿ ಕಣ್ಣಾಲಿ ಒದ್ದೆ ಮಾಡಿಕೊಂಡಿದ್ದರು. (ಏಜೆನ್ಸೀಸ್)