ಜೆಸ್ಕಾಂ ಇಲಾಖೆ: ಗ್ರಾಹಕರ ಕುಂದುಕೊರತೆ ಸಭೆ ನಿರಂತರ ವಿದ್ಯುತ್ ಕಡಿತಕ್ಕೆ ಗ್ರಾಹಕರ ಆಕ್ರೋಶ

raichur
raichur
Published on

ರಾಯಚೂರು ಜೆಸ್ಕಾಂ ಉಪ-ವಿಭಾಗ-1ರ ಕಚೇರಿಯಲ್ಲಿ ಗ್ರಾಹಕರ ಕುಂದುಕೊರತೆ ಸಭೆ ಶನಿವಾರ ಜರುಗಿತು. ಅನಿಯಮಿತ ಲೋಡ್‌ಶೆಡ್ಡಿಂಗ್, ನಿರಂತರ ವಿದ್ಯುತ್ ಕಡಿತ ಹಾಗೂ ಗ್ರಾಹಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದನೆ ಮಾಡದಿರುವ ಬಗ್ಗೆ ಗ್ರಾಹಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ನಗರದ ಡ್ಯಾಡಿಕಾಲೊನಿ, ಕಾಕತೀಯ ಕಾಲೊನಿ ಸೇರಿದಂತೆ ನಗರದ ಬಹುತೇಕ ಕಡೆ ನಿತ್ಯ ಎರಡು ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಶನಿವಾರ, ಭಾನುವಾರ ಹಾಗೂ ಸೋಮವಾರ ದಿನವಿಡೀ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಗ್ರಾಹಕರು ಸಮಸ್ಯೆಗೆ ಒಳಗಾಗಿದ್ದಾರೆ ಎಂದು ದೂರಿದರು. ಜೆಸ್ಕಾಂ ಅಧಿಕಾರಿಗಳು ಎರಡು ತಿಂಗಳ ಅವಧಿಯಲ್ಲೇ ಕೇವಲ ಎರಡೇ ಬಾರಿ ವಾರ್ತಾ ಇಲಾಖೆಯ ಮೂಲಕ ಪತ್ರಿಕಾ ಪ್ರಕಟಣೆ ಕೊಟ್ಟಿದ್ದಾರೆ.


ಮುಂಚಿತವಾಗಿ ಪ್ರಕಟಣೆ ಕೊಡದೇ ತಿಂಗಳ ಪೂರ್ತಿ ನಿತ್ಯ ಎರಡು ತಾಸು ಸಂಜೆ ವೇಳೆಯಲ್ಲೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಸಭೆಯಲ್ಲಿ ಎಂಜಿನಿಯರ್ ಚಂದ್ರಶೇಖರ ದೇಸಾಯಿ ಮಾತನಾಡಿ, ಡ್ಯಾಡಿ ಕಾಲೊನಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಸಲು ಇನ್ನು ಮೂರು ದಿನಗಳಾದರೂ ಬೇಕಾಗಲಿದೆ. ಸಮಯ ನೋಡಿಕೊಂಡು ಒಂದೊಂದು ದಿನ ವಿದ್ಯುತ್ ಕಡಿತಗೊಳಿಸಿ ಹೊಸ ಲೈನ್ ಹಾಕುತ್ತಿದ್ದೇವೆ. ಒಮ್ಮೆ ಈ ಕೆಲಸ ಮುಗಿದರೆ ವಿದ್ಯುತ್ ಕಡಿತಗೊಳಿಸುವ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ವೆಂಕಟೇಶ, ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ದೇಸಾಯಿ, ಎಂಜಿನಿಯರ್ ಮಹಮದ ಶಫಿ, ಸೆಕ್ಟರ್ ಎಂಜಿನಿಯರ್ ರವಿಚಂದ್ರ ,ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net