ಕೋವಿಡ್ 19ನಿಂದ ಆರ್ಥಿಕ ಹಿಂಜರಿತ, ತಡೆಯುವ ಬಗೆ ತಿಳಿಯದೆ ಜರ್ಮನಿ ವಿತ್ತ ಸಚಿವ ಆತ್ಮಹತ್ಯೆ

germany1
Published on

್ರಾಂಕ್‌ರ್ಟ್: ಕರೊನಾ ವೈರಸ್ ಸೋಂಕು ವಿಶ್ವದಾದ್ಯಂತ ತಾಂಡವವಾಡುತ್ತಿದೆ. ಇದರಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಡೀ ದೇಶವನ್ನು ಲಾಕ್‌ಡೌನ್ ಮಾಡುವುದು ಅನಿವಾರ್ಯವಾಗಿದೆ. ಇದರಿಂದಾಗಿ ದೇಶದ ಆರ್ಥಿಕತೆ ಭಾರಿ ಏರುಪೇರಾಗುತ್ತಿದೆ. ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಏನು ಮಾಡಬೇಕು ಎಂಬುದು ತಿಳಿಯದಾಗಿ ಜರ್ಮನಿಯ ಹೆಸ್ಸೆ ಎಂಬ ರಾಜ್ಯದ ವಿತ್ತ ಸಚಿವ ಥಾಮಸ್ ಸ್ಕೇರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವಿಷಯವನ್ನು ಭಾನುವಾರ ಖಚಿತಪಡಿಸಿರುವ ಹೆಸ್ಸೆ ರಾಜ್ಯದ ಮುಖ್ಯಸ್ಥ ವಾಲ್ಕರ್ ಭೌಫಿಯರ್, ರೈಲು ಹಳಿಗಳ ಬಳಿ ಸ್ಕೇರ್ ಅವರ ಶವ ಶನಿವಾರ ಪತ್ತೆಯಾಗಿದ್ದಾಗಿ ತಿಳಿಸಿದ್ದಾರೆ. ಘಟನೆಯಿಂದ ತುಂಬಾ ಅಚ್ಚರಿ, ದುಃಖ ಮತ್ತು ಬೇಸರ ಉಂಟಾಗಿದೆ ಎಂದು ಭೌಫಿಯರ್ ಹೇಳಿದ್ದಾರೆ.

ಸ್ಕೇರ್ ಅವರು 10 ವರ್ಷಗಳಿಂದ ಹೆಸ್ಸೆ ರಾಜ್ಯದ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೋವಿಡ್ 19ರಿಂದ ಉಂಟಾಗಿರುವ ಆರ್ಥಿಕ ಹಿಂಜರಿತದ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಹೆಸ್ಸೆ ರಾಜ್ಯದ ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರ ಜತೆ ಸರಣಿ ಸಭೆಗಳನ್ನು ನಡೆಸುತ್ತಿದ್ದರು. ಆದರೆ ಪರಿಸ್ಥಿತಿ ಸುಧಾರಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಬಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಹೆಸ್ಸೆ ರಾಜ್ಯದಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿದ್ದ ಸ್ಕೇರ್ ರಾಜ್ಯದ ಮುಖ್ಯಸ್ಥರಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿತ್ತು. ಆದರೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net