

Gaza Peace Meeting: ಈಜಿಪ್ಟ್ನ ಶರ್ಮ್ ಎಲ್-ಶೇಖ್ನಲ್ಲಿ ನಡೆಯಲಿರುವ ಗಾಜಾ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿರುವ ಅಂತರ್ರಾಷ್ಟ್ರೀಯ ಶಾಂತಿ ಶೃಂಗಸಭೆಗೆ ಪ್ರಧಾನಿ ಮೋದಿಯನ್ನು ಆಹ್ವಾನಿಸಲಾಗಿದೆ ಎಂದು ಭಾರತ ಸರ್ಕಾರ ದೃಢಪಡಿಸಿದೆ.
ಈ ಸಭೆಯು ಶರ್ಮ್ ಎಲ್-ಶೇಖ್ ಶಾಂತಿ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಜಂಟಿಯಾಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೆ, ಈಜಿಪ್ಟ್ ಅಧ್ಯಕ್ಷತೆಯ ಹೇಳಿಕೆಯ ಪ್ರಕಾರ, 20 ಕ್ಕೂ ಹೆಚ್ಚು ದೇಶಗಳ ನಾಯಕರು ನಿರ್ಣಾಯಕ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಶೃಂಗಸಭೆಗೆ ಪ್ರಧಾನಿ ಮೋದಿಯನ್ನು ಆಹ್ವಾನಿಸಲಾಗಿದೆ ಎಂದು ಭಾರತ ಸರ್ಕಾರ ದೃಢಪಡಿಸಿದೆ. ಅದರೆ, ಮೋದಿ ಬದಲಿಗೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಟ್ರಂಪ್-ಸಿಸಿ ಅವರ ಮಧ್ಯಪ್ರಾಚ್ಯ ಶಾಂತಿ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಇತ್ತೀಚೆಗೆ ಸಾಧಿಸಲಾದ ಕದನ ವಿರಾಮವನ್ನು ಖಾತ್ರಿತಾಗಿಸಲು ಮತ್ತು ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲೀನ ಶಾಂತಿ ಮತ್ತು ಸ್ಥಿರತೆಗಾಗಿ ಒಂದು ಚೌಕಟ್ಟನ್ನು ಸ್ಥಾಪಿಸಲು ಶೃಂಗಸಭೆಯು ಪ್ರಯತ್ನಿಸುತ್ತದೆ. ಅಲ್ಲದೆ, ಗಾಜಾ ಪಟ್ಟಿಯಲ್ಲಿ ಯುದ್ಧವನ್ನು ಕೊನೆಗೊಳಿಸುವುದು. ಈ ಪ್ರದೇಶಕ್ಕೆ ಶಾಂತಿ ಮತ್ತು ಸ್ಥಿರತೆಯನ್ನು ತರುವ ಪ್ರಯತ್ನಗಳನ್ನು ಹೆಚ್ಚಿಸುವುದು ಮತ್ತು ಭದ್ರತೆಯ ಹೊಸ ಹಂತಕ್ಕೆ ನಾಂದಿ ಹಾಡುವುದು ಶೃಂಗಸಭೆಯ ಗುರಿಯಾಗಿದೆ ಎಂದು ಈಜಿಪ್ಟ್ ಅಧ್ಯಕ್ಷತೆ ಹೇಳಿದೆ. ಇದೆ ಸಂದರ್ಭದಲ್ಲಿ ಶಾಂತಿಯನ್ನು ಸಾಧಿಸುವ ಮತ್ತು ಜಾಗತಿಕ ಸಂಘರ್ಷಗಳನ್ನು ಕೊನೆಗೊಳಿಸುವ ಅಧ್ಯಕ್ಷ ಟ್ರಂಪ್ರ ವಿಶಾಲ ದೃಷ್ಟಿಕೋನವನ್ನು ಸಭೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
ಈ ಶೃಂಗಸಭೆಗೆ ಸ್ಪೇನ್, ಜಪಾನ್, ಅಜೆರ್ಬೈಜಾನ್, ಅರ್ಮೇನಿಯಾ, ಹಂಗೇರಿ, ಭಾರತ, ಸೈಪ್ರಸ್, ಗ್ರೀಸ್, ಬಹ್ರೇನ್, ಕುವೈತ್ ಮತ್ತು ಕೆನಡಾ ಸೇರಿದಂತೆ ಹಲವಾರು ಪ್ರಮುಖ ಅಂತರರಾಷ್ಟ್ರೀಯ ಪಾಲುದಾರರಿಗೆ ಅಮೆರಿಕ ಆಹ್ವಾನ ನೀಡಿದೆ ಎಂದು ಆಕ್ಸಿಯಾಸ್ ವರದಿ ಮಾಡಿದೆ. ಈ ಸಭೆಗೆ ಇರಾನ್ನನ್ನು ಸಹ ಆಹ್ವಾನಿಸಲಾಗಿದೆ, ಆದರೂ ಇಸ್ರೇಲ್ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸೋಮವಾರ ಈಜಿಪ್ಟ್ನಲ್ಲಿ ನಡೆಯುವ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಶೃಂಗಸಭೆಯು ನಾಯಕರು ಕದನ ವಿರಾಮ ಒಪ್ಪಂದವನ್ನು ಅನುಮೋದಿಸಲು ಮತ್ತು ಗಾಜಾಗೆ ಮಾನವೀಯ ಮತ್ತು ಪುನರ್ನಿರ್ಮಾಣ ಕ್ರಮಗಳ ಅನುಷ್ಠಾನದ ಬಗ್ಗೆ ಚರ್ಚಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಈಜಿಪ್ಟ್, ಕತಾರ್, ಟರ್ಕಿ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ ಶರ್ಮ್ ಎಲ್-ಶೇಖ್ನಲ್ಲಿ ಮೂರು ದಿನಗಳ ಕಾಲ ನಡೆದ ತೀವ್ರ ಮಾತುಕತೆಗಳ ನಂತರ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಶುಕ್ರವಾರ ಜಾರಿಗೆ ಬಂದಿತು. ಈ ಯೋಜನೆಯ ಮೊದಲ ಹಂತವು ಗಾಜಾ ನಗರ, ರಫಾ, ಖಾನ್ ಯೂನಿಸ್ ಮತ್ತು ಉತ್ತರ ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವುದು. ಸಭೆಯಲ್ಲಿ ಐದು ಮಾನವೀಯ ಕ್ರಾಸಿಂಗ್ಗಳನ್ನು ತೆರೆಯುವುದು ಮತ್ತು ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡುವುದು ಒಳಗೊಂಡಿರುತ್ತದೆ. (ಏಜೆನ್ಸೀಸ್)