ಸರ್ಫರಾಜ್​ ಖಾನ್​ ತೂಕದ ವಿಚಾರ: ಬಿಸಿಸಿಐ ಮುಖ್ಯ ಆಯ್ಕೆಗಾರರಿಗೆ 'ಕ್ರಿಸ್'​ ಕಿವಿಮಾತು​ | Sarfaraz Khan

ವಿಜಯವಾಣಿ (55)
Published on

Sarfaraz Khan: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಲು ಭಾರೀ ಕಸರತ್ತು ನಡೆಸಿದ್ದ ಸರ್ಫರಾಜ್ ಖಾನ್​, ಬರೋಬ್ಬರಿ 10 ಕೆಜಿ ತೂಕವನ್ನು ಇಳಿಸಿಕೊಂಡು, ತಂಡದಲ್ಲಿ ಸ್ಥಾನ ಪಡೆಯಲು ಎದುರುನೋಡುತ್ತಿದ್ದರು. ಆದರೆ, ಸರಣಿಗೂ ಮುನ್ನ ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್​, ಇದನ್ನು ಪರಿಗಣಿಸದೆ ಸರ್ಫರಾಜ್​ರನ್ನು ತಂಡದಿಂದ ಕೈಬಿಟ್ಟರು. ಇದು ಯುವ ಪ್ರತಿಭೆಗೆ ತೀರ ಬೇಸರ ತಂದೊಡ್ಡಿತ್ತು. ಇದೀಗ ಈ ವಿಚಾರಕ್ಕೆ ಮಾಜಿ ಕ್ರಿಕೆಟಿಗ ಕ್ರಿಸ್​ ಗೇಲ್​ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ, 17 ಕೆಜಿ ತೂಕವನ್ನು ಇಳಿಸಿಕೊಂಡು, ಸಖತ್ ಫಿಟ್​ ಆಗಿರುವ ಸರ್ಫರಾಜ್ ಖಾನ್, ರಾಷ್ಟ್ರೀಯ ತಂಡಕ್ಕೆ ಮರಳಲು ಭಾರೀ ಶ್ರಮಿಸುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಶತಕದಾಟ ಮತ್ತು ಅದ್ಭುತ ಇನ್ನಿಂಗ್ಸ್ ತೋರಿರುವ ಖಾನ್​, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಹೆಬ್ಬಯಕೆ ಹೊಂದಿದ್ದಾರೆ. ಆದರೆ, ಇದು ಸಾಧ್ಯವಾಗದೆ ಇರುವುದು ಹಲವರ ಪ್ರಶ್ನೆ, ಚರ್ಚೆಗೆ ಕಾರಣವಾಗಿದೆ.

ಆಯ್ಕೆಗಾರರು ತಮ್ಮನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದೇ ಅತಿಯಾದ ತೂಕ ಮತ್ತು ಫಿಟ್ನೆಸ್​ ಕಾಪಾಡಿಕೊಳ್ಳಲಿಲ್ಲ ಎಂಬ ವಿಷಯಕ್ಕೆ ಎಂಬುದನ್ನು ಅರಿತ ಬೆನ್ನಲ್ಲೇ ಸರ್ಫರಾಜ್​ ತೂಕ ಇಳಿಕೆಗೆ ಮುಂದಾದರು ಎಂದು ವರದಿ ಉಲ್ಲೇಖಿಸಿದೆ. ಬಿಸಿಸಿಐ ಆಯ್ಕೆಗಾರರು ಯುವ ಆಟಗಾರರನ್ನು ಪರಿಗಣಿಸಲಿಲ್ಲ ಎಂಬ ವಿಚಾರವನ್ನು ಪಾಡ್​ಕಾಸ್ಟ್​ನಲ್ಲಿ ಪ್ರಸ್ತಾಪಿಸಿದ ಗೇಲ್​, ಸರ್ಫರಾಜ್​ರನ್ನು ಟೆಸ್ಟ್​ ತಂಡದಲ್ಲಿ ಆಡಿಸುವುದು ಉತ್ತಮ ಎಂದಿದ್ದಾರೆ.

"ಇತರೆ ಫಾರ್ಮೆಟ್​ ಅಲ್ಲದಿದ್ದರೂ ಕನಿಷ್ಠ ಪಕ್ಷ ಟೆಸ್ಟ್ ತಂಡದಲ್ಲಾದರೂ ಅವರಿರಬೇಕು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಆಕರ್ಷಕ ಶತಕ ಗಳಿಸಿದ್ದಾರೆ. ನಾನು ಎರಡು ದಿನಗಳ ಹಿಂದೆ ಒಂದು ಪೋಸ್ಟ್ ನೋಡಿದೆ. ಅವರು, ತೂಕ ಇಳಿಸಿಕೊಂಡಿದ್ದಾರೆ ಎಂದು. ರನ್ ಗಳಿಸುವಲ್ಲಿ ಸರ್ಫರಾಜ್​ ಉತ್ತಮ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅವರು ತ್ರಿಶತಕ ಸಿಡಿಸಿದ್ದಾರೆ. ಅವರಿಗೆ ತಂಡದಲ್ಲಿ ಸ್ಥಾನ ಕೊಡುವುದು ಒಳ್ಳೆಯದು. ಭಾರತದಲ್ಲಿ ಸಾಕಷ್ಟು ಪ್ರತಿಭೆಗಳಿಂದ ಕೂಡಿದೆ. ಅವಕಾಶ ಕೊಡಿ ನೋಡೋಣ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net