ಬಾಲಕನ ಮೇಲೆ 14 ಮಂದಿಯಿಂದ ಲೈಂಗಿಕ ದೌರ್ಜನ್ಯ; ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ ನೋಡಿ | Kerala Boy

Gay Dating App
Published on

Kerala Boy: ಇತ್ತೀಚೆಗಷ್ಟೇ ಕೇರಳದಲ್ಲಿ 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನವಾಗಿರುವ 9 ಮಂದಿ ಆರೋಪಿಗಳಲ್ಲಿ ಓರ್ವ ರಾಜಕಾರಣಿ, ಇಬ್ಬರು ಸರ್ಕಾರಿ ನೌಕರರು ಮತ್ತು ಓರ್ವ ಫುಟ್​ಬಾಲ್​ ಕೋಚ್​ ಸೇರಿದ್ದಾರೆ. ಆರೋಪಿಗಳು ಗೇ ಡೇಟಿಂಗ್​ ಆ್ಯಪ್​ ಮೂಲಕ ಬಾಲಕನನ್ನು ಪರಿಚಯಿಸಿಕೊಂಡು ಕೃತ್ಯ ಎಸಗಿದ್ದಾರೆಂದು ಹೇಳಲಾದ ಪ್ರಕರಣದಲ್ಲಿ ಶಾಕಿಂಗ್ ಸಂಗತಿಗಳು ಬೆಳಕಿಗೆ ಬಂದಿವೆ.

ಚಂದೇರ ಕಾಸರಗೋಡಿನಲ್ಲಿ ಅಪ್ರಾಪ್ತ ಬಾಲಕನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿದ್ದು, ಈ ಅಪರಾಧದಲ್ಲಿ ಲಕ್ಷಾಂತರ ರೂ. ಮೌಲ್ಯದ ಹಣಕಾಸಿನ ವ್ಯವಹಾರ ನಡೆದಿದೆ ಎಂದು ವರದಿಯಾಗಿದೆ. LGBTQ ಸಮುದಾಯಗಳಿಗಾಗಿ ವಿನ್ಯಾಸಗೊಳಿಸಲಾದ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್ ಮೂಲಕ ಆರೋಪಿ, ಅಪ್ರಾಪ್ತ ವಯಸ್ಕನನ್ನು ಭೇಟಿಯಾಗಿದ್ದಾನೆ. ಅಪರಾಧದಲ್ಲಿ ಲಾಡ್ಜ್ ನಡೆಸುತ್ತಿದ್ದವರು ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

12 ಮಂದಿ ಅರೆಸ್ಟ್​

ದೌರ್ಜನ್ಯ ನಡೆದ ಸ್ಥಳಗಳಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದು, ಇಲ್ಲಿಯವರೆಗೆ ಪ್ರಕರಣದಲ್ಲಿ ಒಟ್ಟು 12 ಜನರನ್ನು ಬಂಧಿಸಲಾಗಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ಡೇಟಿಂಗ್ ಅಪ್ಲಿಕೇಶನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ ಹೇಳಿದ್ದಾರೆ. ಅಪ್ಲಿಕೇಶನ್‌ಗಳಿಗೆ ಲಾಗಿನ್ ಆಗಲು ವೈಯಕ್ತಿಕ ವಿವರಗಳು ಮತ್ತು ಗುರುತಿನ ದಾಖಲೆಗಳನ್ನು ಕಡ್ಡಾಯಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.

ಡೇಟಿಂಗ್ ಅಪ್ಲಿಕೇಶನ್ ಮೂಲಕ ಬಾಲಕನೊಂದಿಗೆ ಸಂಪರ್ಕಕ್ಕೆ ಬಂದ ಬಳಿಕ ಆತನನ್ನು ಜಿಲ್ಲೆಯ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಆರೋಪಿಗಳು ಕಾಸರಗೋಡು, ಕಣ್ಣೂರು ಮತ್ತು ಕೋಝಿಕ್ಕೋಡ್ ಜಿಲ್ಲೆಗಳಿಂದ ಬಂದವರು ಎನ್ನಲಾಗಿದೆ. ಅಪ್ರಾಪ್ತ ಬಾಲಕನು ಎರಡು ವರ್ಷಗಳಿಂದ ಈ ದೌರ್ಜನ್ಯಕ್ಕೆ ಒಳಗಾಗಿದ್ದಾನೆ ಎಂದು ವರದಿಯಾಗಿದೆ. ಪ್ರಸ್ತುತ 14 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 8 ಪ್ರಕರಣಗಳು ಕಾಸರಗೋಡಿಗೆ ಸೇರಿವೆ.

ಪ್ರಕರಣ ಬಯಲಿಗೆ ಬಂದಿದ್ದೇಗೆ?

ಒಮ್ಮೆ ಬಾಲಕನ ತಾಯಿ ಮನೆಗೆ ಬಂದಾಗ ವ್ಯಕ್ತಿಯೊಬ್ಬ ಮನೆಯಿಂದ ಓಡಿಹೋಗುವುದನ್ನು ನೋಡಿ ಅನುಮಾನಗೊಂಡು ವಿಚಾರಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಮಗನನ್ನು ಪ್ರಶ್ನೆ ಮಾಡಿದಾಗ ನಡೆದಿದ್ದೆಲ್ಲವನ್ನು ಆ ಬಾಲಕ ಬಹಿರಂಗಪಡಿಸಿದ್ದಾನೆ. ಮಾಹಿತಿ ತಿಳಿದ ಕೂಡಲೇ ಬಾಲಕನ ತಾಯಿ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಎಲ್ಲವನ್ನು ತಿಳಿಸಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂತ್ರಸ್ತ ಬಾಲಕನ ಹೇಳಿಕೆಯ ನಂತರ, ಪೊಲೀಸರು 16 ವ್ಯಕ್ತಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ-2012ರ ಅಡಿಯಲ್ಲಿ 14 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ನಡೆದ ಎಂಟು ಪ್ರಕರಣಗಳ ತನಿಖೆಗಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಾಲ್ವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಉಳಿದ ಆರು ಪ್ರಕರಣಗಳನ್ನು ತನಿಖೆಗಾಗಿ ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net