

Gautam Gambhir: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ತಂಡದ ನಾಯಕತ್ವವನ್ನು ರೋಹಿತ್ ಶರ್ಮರಿಂದ ಕಸಿದು ಟೆಸ್ಟ್ ಕ್ಯಾಪ್ಟನ್ ಶುಭಮನ್ ಗಿಲ್ಗೆ ಹಸ್ತಾಂತರಿಸಿದ್ದು ಹಲವರ ಕೆಂಗಣ್ಣಿಗೆ ಗುರಿಯಾಯಿತು. ಈ ಕುರಿತಂತೆ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಕಾಲೆಳೆದ ಕ್ರಿಕೆಟ್ ಪ್ರಿಯರು, ರೋಹಿತ್ರಿಂದ ಗಿಲ್ಗೆ ಕೊಡುವಂತದ್ದೇನಿತ್ತು ಎಂದು ಟೀಕಿಸಿದ್ದರು. ಇದೀಗ ಅದಕ್ಕೆಲ್ಲ ಗೌತಿ ಖಡಕ್ ಉತ್ತರವನ್ನೇ ಕೊಟ್ಟಿದ್ದಾರೆ.
ರೋಹಿತ್ ಶರ್ಮ ಟೆಸ್ಟ್ ನಿವೃತ್ತಿಯ ಬೆನ್ನಲ್ಲೇ ಇಂಗ್ಲೆಂಡ್ ತಂಡಕ್ಕೆ ನಾಯಕನಾಗಿ ಆಯ್ಕೆಯಾದ ಶುಭಮನ್, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸುವ ಮೂಲಕ ತಂಡವನ್ನು ಯಶಸ್ಸಿನತ್ತ ಸಾಗಿಸಿದರು. ಇನ್ನು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಉಪನಾಯಕನಾಗಿ ಆಡಿದ ಗಿಲ್, ಫೈನಲ್ನಲ್ಲಿ ಪಾಕ್ ವಿರುದ್ಧ ಭರ್ಜರಿ ಜಯ ಗಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ಇದೀಗ ಏಕದಿನ ತಂಡಕ್ಕೂ ಕ್ಯಾಪ್ಟನ್ ಆಗಿರುವ ಶುಭಮನ್, ಕ್ರಿಕೆಟ್ ದಿಗ್ಗಜರಾದ ರೋಹಿತ್ ಮತ್ತು ಕೊಹ್ಲಿಯನ್ನು ಒಳಗೊಂಡ ಬಲಿಷ್ಠ ತಂಡವನ್ನೇ ಮುನ್ನಡೆಸಲು ಸಜ್ಜಾಗಿದ್ದಾರೆ.
ಗಿಲ್ ನಾಯಕತ್ವದ ಬಗ್ಗೆ ಮಾತನಾಡಿದ ಗೌತಿ, "ಆತ ಈಗ ಏಕದಿನ ಕ್ಯಾಪ್ಟನ್. ಶುಭಮನ್ ಅಂದುಕೊಂಡಂತೆ ಸಾಗದೆ ಇದ್ದಾಗ, ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನಾನು ನೋಡಬೇಕು. ಅದು ವೈಯಕ್ತಿಕ ಅಥವಾ ತಂಡದ ದೃಷ್ಟಿಕೋನದಿಂದ ಇರಬಹುದು. ಅವರಿಗೆ ಸದಾ ಒಂದು ವಿಷಯವನ್ನು ಹೇಳುತ್ತಲೇ ಇರ್ತಿನಿ. ಗಿಲ್ ಹಿಂದೆ ನಾನಿರುವೆ. ಅವರನ್ನು ಪ್ರೋತ್ಸಾಹಿಸಿ, ಹುರಿದುಂಬಿಸಲು ಮತ್ತು ರಕ್ಷಿಸಲು ಖಂಡಿತ ಇರುತ್ತೇನೆ" ಎಂದಿದ್ದಾರೆ.
"ನನ್ನ ಕೆಲಸವೇ ಆತನ ಮೇಲಿರುವ ಒತ್ತಡವನ್ನು ಇಳಿಸುವುದು. ಅವರಿಗೋಸ್ಕರ ಎಲ್ಲ ಟೀಕೆಗಳನ್ನು ಸಹಿಸಲು ನಾನು ಸಿದ್ಧನಿದ್ದೇನೆ. ಅದೂ, ತಂಡಕ್ಕೆ ಅವರಿಂದ ಒಳ್ಳೆಯ ಕೆಲಸಗಳು ಆಗುತ್ತಿದ್ದರೆ ಮಾತ್ರ. ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ನಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ, ಪ್ರಾಮಾಣಿಕವಾಗಿ ಇದ್ದಲ್ಲಿ. ಗೌರವ ಗಳಿಸಲು ಇದೊಂದೇ ದಾರಿ ಅವರಿಗಿರುವುದು. ಇಲ್ಲಿಯವರೆಗೆ ಅವರು ಅದ್ಭುತವಾಗಿಯೇ ಸಾಗಿದ್ದಾರೆ. ಒಬ್ಬ ಕೋಚ್ಗೆ ಏನು ಬೇಕೋ, ಅದನ್ನೆಲ್ಲ ಗಿಲ್ ಈಡೇರಿಸುತ್ತಿದ್ದಾರೆ" ಎಂದು ಗೌತಿ ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).