

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ ಆರಂಭಿಸಿದೆ. ಇನ್ನು ಕೆಲ ತಂಡಗಳು ಈ ಬಾರಿಯಾದರೂ ಟ್ರೋಫಿ ಗೆಲ್ಲಬೇಕೆಂಬ ನಿಟ್ಟಿನಲ್ಲಿ ತಯಾರಿ ನಡೆಸಲು ಶುರು ಮಾಡಿದ್ದು, ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡತೊಡಗಿವೆ.
ಈ ಪೈಕಿ ಇತ್ತೀಚಿಗೆ ಲಖನೌ ಸೂಪರ್ಜೈಂಟ್ಸ್ ತಂಡವನ್ನು ತೊರೆದು ಕಲ್ಕತ್ತಾ ನೈಟ್ರೈಡರ್ಸ್ ತಂಡವನ್ನು ಕೂಡಿಕೊಂಡಿದ್ದ ಗೌತಮ್ ಗಂಭೀರ್ ಈ ಬಗ್ಗೆ ಮಾತನಾಡಿದ್ದು, ಬಂಗಾಳ ಜನರು ನನಗೆ ನೀಡಿದ್ದ ಪ್ರೀತಿಯನ್ನು ಹಿಂತಿರುಗಿಸಲು ಇದು ಸರಿಯಾದ ಸಮಯ ಎಂದಿದ್ದಾರೆ.
ಅಲ್ಲಿಗೆ ಮರಳಿದಾಗ ನನಗೆ ಶ್ರಮ, ನೆನಪು ಹಾಗೂ ತಂಡದ ಮೇಲಿನ ಭಾವನೆ ಮರಳಿ ನೆನಪಿಗೆ ಬರುತ್ತವೆ. ಇದು ಹೊಸ ಆರಂಭ ಮತ್ತು ಆಶಾದಾಯಕವಾಗಿ ನಾನು ತಂಡವನ್ನು ಮುನ್ನಡೆಸಲು ನೋಡುತ್ತೇನೆ. ಬಂಗಾಳದ ಜನರು ನನಗೆ ತೋರಿರುವ ಪ್ರೀತಿ ಕೆಕೆಆರ್ ನನ್ನ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದೆ. ಇದು ಅವರಿಗೆ ಹಿಂತಿರುಗಿಸಲು ಸರಿಯಾದ ಸಮಯ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಕಲ್ಕತ್ತಾ ನೈಟ್ರೈಡರ್ಸ್ ತಂಡವು 2012 ಹಾಗೂ 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. ಒಂದು ರೀತಿಯಲ್ಲಿ ಗಂಭೀರ್ ತವರಿಗೆ ಮರಳಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ, ಮುಂದಿನ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮೆಂಟರ್ ಆಗಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಖದು ನೋಡಬೇಕಿದೆ.