

ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಎಡನೀರು ಸಮೀಪ ಎದುರ್ತೋಡಿನಲ್ಲಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಭಾರಿ ದುರಂತ ಸ್ವಲ್ಪದರಲ್ಲೇ ತಪ್ಪಿದೆ.
ಬುಧವಾರ ಮಧ್ಯಾಹ್ನ ಎದುರ್ತೋಡಿನ ಇಳಿಜಾರು ಪ್ರದೇಶದಲ್ಲಿ ಮಂಗಳೂರಿನಿಂದ ಕೋಯಿಕ್ಕೋಡಿಗೆ ತೆರಳುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ವಾಹನ ಸಂಚಾರ ತಾಸುಗಳ ಕಾಲ ಸ್ಥಗಿತಗೊಂಡಿತ್ತು.
ಕಾಸರಗೋಡಿನಿಂದ ಚಂದ್ರಗಿರಿ ಹಾದಿಯಾಗಿ ಕಾಞಂಗಾಡು ಕೆಎಸ್ಟಿಪಿ ರಸ್ತೆ ಚಂದ್ರಗಿರಿ ಸೇತುವೆವರೆಗೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಸೇರಿದಂತೆ ದೊಡ್ಡ ವಾಹನಗಳನ್ನು ಕುಂಬಳೆಯಿಂದ ಬದಿಯಡ್ಕ ಹಾದಿಯಾಗಿ ಚೆರ್ಕಳ ಮೂಲಕ ಹೆದ್ದಾರಿಗೆ ಬಿಡಲಾಗುತ್ತಿದೆ. ಪಲ್ಟಿಯಾದ ಟ್ಯಾಂಕರ್ನಿಂದ ಅನಿಲ ಸೋರಿಕೆಯುಂಟಾಗಿಲ್ಲ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ. ಬೇರೊಂದು ಟ್ಯಾಂಕರ್ಗೆ ಅನಿಲ ರವಾನಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.