ಬೆಳಗಾವಿ:ನಗರದ ಪ್ರಮುಖ ರಸ್ತೆಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ರಸ್ತೆಗಳ ಪಕ್ಕದಲ್ಲೇ ಹಸಿ ಕಸ ಸಂಗ್ರಹವಾಗುತ್ತಿದ್ದು, ಗಬ್ಬು ವಾಸನೆ ಸೂಸುತ್ತಿದೆ.
ಪಿ.ಬಿ.ರಸ್ತೆ, ಪಾಟೀಲ ಗಲ್ಲಿ, ಸ್ಟೇಶನ್ ಮುಖ್ಯ ರಸ್ತೆಯ ಪಕ್ಕದಲ್ಲಿ ಪ್ಲಾಸ್ಟಿಕ್, ಹಸಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ಹಂದಿ, ಬೀದಿ ನಾಯಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆ ಉಂಟಾಗುತ್ತಿದೆ.
ಕಸದ ವಾಹನಗಳು ನಿಯಮಿತವಾಗಿ ಬರದೇ ಇರುವುದರಿಂದ ಪರಿಸ್ಥಿತಿ ಹೀಗೆಯೇ ಮುಂದುವರಿದಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಹಲವು ಪ್ರದೇಶಗಳಲ್ಲಿ ಖಾಸಗಿ ಸ್ವಚ್ಛತಾ ಕಾರ್ಯಕರ್ತರನ್ನು ನೇಮಿಸುವ ಸಲಹೆ ಕೇಳಿ ಬರುತ್ತಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ನಗರದ ಸ್ವಚ್ಛತೆ ಕಾಪಾಡುವುದು ಅಧಿಕಾರಿಗಳ ಮುಖ್ಯ ಜವಾಬ್ದಾರಿ. ಸಾರ್ವಜನಿಕರು ಹಾಗೂ ಸ್ಥಳೀಯ ಸಂಸ್ಥೆಗಳು ಒಗ್ಗೂಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿವೆ.
ನಾಗರಿಕರ ಸಹಕಾರವೂ ಮುಖ್ಯ:ನಗರದ ಬಹಳಷ್ಟು ಸ್ಥಳಗಳಲ್ಲಿ ಪ್ರತಿದಿನ ಪಾಲಿಕೆಯ ಕಸ ವಿಲೇವಾರಿ ವಾಹನಗಳು ಬಂದು ಕಸ ತುಂಬಿಕೊಂಡು ಹೋದ ಬಳಿಕವೂ ಸಾರ್ವಜನಿಕರು ರಸ್ತೆಯ ಅಲ್ಲಲ್ಲಿ ಕಸ ತಂದು ಎಸೆಯುತ್ತಿದ್ದಾರೆ. ಕಸ ಎಸೆಯುತ್ತಿದ್ದ ಸ್ಥಳಗಳನ್ನು ಪಾಲಿಕೆ ಸಿಬ್ಬಂದಿ ಗುರುತಿಸಿ ಆ ಜಾಗದಲ್ಲಿ ಸಸಿಗಳನ್ನು ನೆಟ್ಟು ಜಾಗೃತಿ ಮೂಡಿಸಿದರೂ ಜನರು ಬೇರೆ ಜಾಗದಲ್ಲಿ ಕಸ ಎಸೆಯುತ್ತಿದ್ದಾರೆ. ನಗರದ ಸ್ವಚ್ಛತೆಯಿಂದ ಇಡುವ ಜವಾಬ್ದಾರಿಯೂ ಪ್ರತಿ ನಾಗಕರದ್ದಾಗಿದೆ. ಕಸ ವಿಲೇವಾರಿಯಲ್ಲಿ ಪಾಲಿಕೆಯೊಂದಿಗೆ ಜನರು ಸಹಭಾಗಿತ್ವ ಪ್ರಮುಖವಾಗಿದೆ.