ಗ್ಯಾಂಗ್‌ಸ್ಟರ್ ಯೋಗೇಶ್ ಕಡಿಯನ್​ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಮಾಡಿದ ಇಂಟರ್‌ಪೋಲ್

Yogesh Kadian
Published on

ನವದೆಹಲಿ: ಹರ್ಯಾಣದ 19 ವರ್ಷದ ಯುವಕನ ವಿರುದ್ಧ ಇಂಟರ್‌ಪೋಲ್ ಕ್ರಿಮಿನಲ್ ಸಂಚು ಮತ್ತು ಹಲವು ಕೊಲೆ ಯತ್ನದ ಆರೋಪ ಹೊರಿಸಿದೆ. 2ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ ಯೋಗೇಶ್ ಕಡಿಯನ್ ತನ್ನ ಕಡುವಿರೋಧಿ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನನ್ನು ಹೊಡೆದುರುಳಿಸಲು ಯತ್ನಿಸುತ್ತಿರುವ ಆರೋಪ ಎದುರಿಸುತ್ತಿದ್ದಾನೆ.

ಪ್ರಸ್ತುತ ಯುಎಸ್‌ನಲ್ಲಿರುವ ಬಬಿನ್ಹಾ ಗ್ಯಾಂಗ್‌ ಜತೆ ಗುರುತಿಸಿಕೊಂಡಿರುವ ಕಡಿಯನ್‌ನನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲಿ ಪರಿಣಿತ ಎಂದು ಪರಿಗಣಿಸಲಾಗಿದೆ. ಬಾಲಾಪರಾಧಿಯಾಗಿದ್ದ ಇವನು 17 ವರ್ಷದವನಿರುವಾಗಲೇ ನಕಲಿ ಪಾಸ್‌ಪೋರ್ಟ್‌ ಬಳಸಿ ಅಮೆರಿಕಾಗೆ ಪರಾರಿಯಾಗಿದ್ದ.

ಇಂಟರ್‌ಪೋಲ್ ತನ್ನ ನೋಟಿಸ್‌ನಲ್ಲಿ "ಕ್ರಿಮಿನಲ್ ಪಿತೂರಿ, ಕೊಲೆಯ ಯತ್ನ, ಸಾಮಾನ್ಯ ಉದ್ದೇಶಕ್ಕಾಗಿ ಹಲವರ ಹತ್ಯೆ, ನಿಷೇಧಿತ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು, ಮದ್ದುಗುಂಡು ಸಂಗ್ರಹ ಮತ್ತು ಬಳಕೆ ಸೇರಿದಂತೆ ಹಲವು ಆರೋಪ ಮಾಡಿದೆ.

ಮೂಲಗಳ ಪ್ರಕಾರ, ಇವನು ಬಾಬಿನ್ಹಾ ಗ್ಯಾಂಗ್ ಮತ್ತು ಖಲಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ. ಖಲಿಸ್ತಾನ್ ಉಗ್ರರ ಸಂಪರ್ಕದ ತನಿಖೆಗಾಗಿ ಇವನ ಭಾರತದಲ್ಲಿನ ಮನೆ ಮತ್ತು ಅನುಮಾನವಿದ್ದ ಅಡಗುತಾಣಗಳ ಮೇಲೆ ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ ದಾಳಿ ನಡೆಸಿತ್ತು.

ಕಡಿಯನ್​ ಬಗ್ಗೆ ಮಾಹಿತಿ ನೀಡಿದವರಿಗೆ 1.5 ಲಕ್ಷ ರೂ.ಬಹುಮಾನ ಘೋಷಿಸಲಾಗಿದ್ದು, ಇಂಟರ್‌ಪೋಲ್ ಇವನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಇಂಟರ್‌ಪೋಲ್‌ನ ರೆಡ್ ಕಾರ್ನರ್ ನೋಟಿಸ್ ಜಾರಿಯಿಂದ ಸದಸ್ಯ ರಾಷ್ಟ್ರಗಳ ಕಾನೂನು ಜಾರಿ ಅಧಿಕಾರಿಗಳಿಗೆ ಆರೋಪಿಯನ್ನು ಹಸ್ತಾಂತರಿಸಬಹುದಾಗಿದೆ. ಶರಣಾಗತಿ ಅಥವಾ ಅಂತಹುದೇ ಕಾನೂನು ಪ್ರಕ್ರಿಯೆ ನಡೆಯುವವರೆಗೆ ಆರೋಪಿಯನ್ನು ಹುಡುಕಲು ಮತ್ತು ತಾತ್ಕಾಲಿಕವಾಗಿ ಬಂಧಿಸಬಹುದಾಗಿದೆ.

ಈ ಹಿಂದೆ ವಿದೇಶದಲ್ಲಿ ನೆಲೆಸಿದ್ದಾನೆ ಎಂದು ನಂಬಲಾದ ದರೋಡೆಕೋರ ಹಿಮಾಂಶು ಅಲಿಯಾಸ್ ಭಾವು ವಿರುದ್ಧ ಇಂಟರ್‌ಪೋಲ್ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ರೆಡ್ ಕಾರ್ನರ್​ ನೋಟಿಸ್ ಜಾರಿ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net