ಗಂಗೊಳ್ಳಿ ಬಂದರು ಅಭಿವೃದ್ಧಿ ಮರೀಚಿಕೆ

gan
Published on

ಕುಂದಾಪುರ: ಗಂಗೊಳ್ಳಿ ಬಂದರು ಅಭಿವೃದ್ಧಿ ಕನಸಾಗಿಯೇ ಉಳಿದಿದೆ. ಈಗಾಗಲೇ ನಡೆದಿರುವ ಕಾಮಗಾರಿಗಳು ಕಳಪೆಯಾಗಿದ್ದು, ಸಮಸ್ಯೆಗಳು ಮತ್ತಷ್ಟು ಜಾಸ್ತಿಯಾಗುತ್ತಿವೆ. ಮೂಲಭೂತ ಸಮಸ್ಯೆ ನಿವಾರಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪವೂ ಇದೆ. ಕಳೆದ ಮೀನುಗಾರಿಕಾ ಋತು ಅಂತ್ಯಗೊಳ್ಳುವ ವೇಳೆ ಇದ್ದ ಸಮಸ್ಯೆಗಳು ಇಂದಿಗೂ ಇವೆ. ಮೀನುಗಾರರು ಆತಂಕದಲ್ಲೇ ಕಡಲಿಗಿಳಿಯುವ ಸ್ಥಿತಿ ನಿರ್ಮಾಣವಾಗಿದೆ. ಗಂಗೊಳ್ಳಿಯಲ್ಲಿ ಪ್ರಸ್ತುತ 40 ಪರ್ಸಿನ್ ಬೋಟು, 50ಕ್ಕೂ ಹೆಚ್ಚು 370 ಬೋಟು, 100ಕ್ಕೂ ಮಿಕ್ಕಿ ಸಿಂಗಲ್ ಟ್ರಾಲ್ ಬೋಟು, 300ಕ್ಕೂ ಹೆಚ್ಚು ಮಿಕ್ಕಿ ಔಟ್‌ಬೋರ್ಡ್ ದೋಣಿಗಳು ಹಾಗೂ 100ಕ್ಕೂ ಅಧಿಕ ನಾಡದೋಣಿಗಳು ಕಾರ್ಯ ನಿರ್ವಹಿಸುತ್ತವೆ. ಮೀನುಗಾರಿಕಾ ಜೆಟ್ಟಿ ಪ್ರದೇಶದಲ್ಲಿ ಹೂಳು ತುಂಬಿಕೊಂಡಿದ್ದು, ಬೋಟು ಮತ್ತು ದೋಣಿಗಳ ನಿಲುಗಡೆ ಕಷ್ಟವಾಗುತ್ತಿದೆ. ಇನ್ನು 150 ಮೀಟರ್ ಜೆಟ್ಟಿ ಪುನರ್ ನಿರ್ವಾಣ ಕಾರ್ಯ ಸ್ಥಗಿತಗೊಂಡಿದ್ದು, ಸಮಸ್ಯೆಗಳ ಆಗರವಾಗಿದೆ. ಮೂಲ ಸೌಲಭ್ಯಗಳಿಲ್ಲ: ಬಂದರಿನಲ್ಲಿ ವ್ಯವಹಾರಕ್ಕೆಂದು ಬರುವವರಿಗೆ ಸರಿಯಾದ ಶೌಚಗೃಹದ ವ್ಯವಸ್ಥೆಯಿಲ್ಲದೆ ತೊಂದರೆಯಾಗುತ್ತಿದೆ. ಮೀನುಗಾರ ಮಹಿಳೆಯರಿಗೆ ತಂಗಲು ಸರಿಯಾದ ವಿಶ್ರಾಂತಿ ಗೃಹಗಳಿಲ್ಲ. ಗಂಗೊಳ್ಳಿಯಲ್ಲಿ ಕುಡಿಯುವ ನೀರಿಗೆ ಬರ ಇಲ್ಲದಿದ್ದರೂ, ಬಂದರಿನಲ್ಲಿ ಮಾತ್ರ ಕುಡಿಯುವ ನೀರಿಲ್ಲ.

ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ತುರ್ತಾಗಿ ಕಾಮಗಾರಿಗಳು ನಡೆಯಬೇಕಿದೆ. ಸರ್ಕಾರ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸಬೇಕು. ಬಂದರು ವಿಸ್ತರಣೆಗೆ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net