ಗಂಗೊಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ

DC Vidyakumari
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿದರು.
Published on

ಗಂಗೊಳ್ಳಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಪಂ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

2021ರಲ್ಲಿ ನಿಗದಿಪಡಿಸಲಾದ ಮೀಸಲಾತಿಯಂತೆ ಅಧ್ಯಕ್ಷ ಮತ್ತು ಉಪಾದ್ಯಕ್ಷರನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ(ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜ.1ರಂದು ನಡೆಯಲಿದ್ದು, ಕುಂದಾಪುರ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಅವರು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಡಿ.8ರಂದು ನಡೆದ ಚುನಾವಣೆಯಲ್ಲಿ 33 ಸದಸ್ಯ ಬಲದ ಗಂಗೊಳ್ಳಿ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರು 12 ಸ್ಥಾನಗಳಲ್ಲಿ, ಎಸ್‌ಡಿಪಿಐ ಬೆಂಬಲಿತರು 7 ಸ್ಥಾನಗಳಲ್ಲಿ, ಬಿಜೆಪಿ ಬೆಂಬಲಿತರು 12 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಎಸ್‌ಡಿಪಿಐ ಜತೆ ಸೇರಿ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯಗಳಿವೆ.

ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಾಲಾಗುವ ಸಾಧ್ಯತೆಗಳಿದ್ದು, ಗಂಗೊಳ್ಳಿ-6 ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ಬೆಂಬಲಿತ ಜಯಂತಿ ಖಾರ್ವಿ ಹೆಸರು ಮುಂಚೂಣಿಯಲ್ಲಿದೆ. ಮಂಜುಳಾ ದೇವಾಡಿಗ, ಸುರೇಖಾ ಕಾನೋಜಿ ಹೆಸರು ಚಾಲ್ತಿಯಲ್ಲಿದೆ. ಉಪಾಧ್ಯಕ್ಷ ಸ್ಥಾನ ಎಸ್‌ಡಿಪಿಐ ಬೆಂಬಲಿತರ ಪಾಲಾಗುವ ಸಾಧ್ಯತೆಗಳಿದ್ದು, ಗಂಗೊಳ್ಳಿ-2ನೇ ಕ್ಷೇತ್ರದಿಂದ ಆಯ್ಕೆಯಾದ ತಬ್ರೇಜ್ ಮತ್ತು ಅಬೂಬಕ್ಕರ್ ನಾಕುದಾ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಕಾಂಗ್ರೆಸ್ ಬೆಂಬಲಿತ ದೇವೇಂದ್ರ ಖಾರ್ವಿ, ಜಯೇಂದ್ರ ಖಾರ್ವಿ ಹೆಸರು ಉಪಾಧ್ಯಕ್ಷ ಸ್ಥಾನಕ್ಕೆ ತೇಲಿಬರುತ್ತಿದೆ.

ಅಧಿಕಾರ ಗದ್ದುಗೆ ಏರುವ ಆಸೆ ಜೀವಂತ ಇಟ್ಟುಕೊಂಡಿರುವ ಬಿಜೆಪಿ, ಸರಳ ಬಹುಮತಕ್ಕೆ ಮೂರು ಸ್ಥಾನದ ಕೊರತೆ ಇದೆ. ಆದಾಗ್ಗ್ಯೂ ಅಧ್ಯಕ್ಷ ಸ್ಥಾನಕ್ಕೆ ಸರೋಜಾ ಕೃಷ್ಣ ಪೂಜಾರಿ, ರೇಖಾ ಖಾರ್ವಿ, ನಾಗರತ್ನ ಶೇರುಗಾರ್, ಅಶ್ವಿನಿ ಖಾರ್ವಿ ಹೆಸರು ಕೇಳಿ ಬರುತ್ತಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜ ಖಾರ್ವಿ ಹೆಸರು ಮುಂಚೂಣಿಯಲ್ಲಿದೆ. ಬಿಜೆಪಿ ಕೊನೇ ಕ್ಷಣದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಗಳಾಗಿ ಗೆದ್ದಿರುವ ಮಮತಾ ಎಸ್.ಗಾಣಿಗ ಮತ್ತು ಗೋಪಾಲ ಖಾರ್ವಿ ಅವರನ್ನು ಬೆಂಬಲಿಸಿದರೂ ಆಶ್ಚರ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net