ಗಂಗಾವತಿ: ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ವಿಜಯದಾಸರ ಮಧ್ಯಾರಾಧನೆ ಸೋಮವಾರ ಸಂಪನ್ನಗೊಂಡಿತು.
ವಿಜಯದಾಸ ಭಕ್ತ ಮಂಡಳಿಯಿಂದ ಶ್ರೀ ವಿಜಯಕವಚ ಪಾರಾಯಣ ಸಮರ್ಪಣೆ, ಮಹಾಮಂಗಳಾರತಿ, ನಿರಂತರ ಭಜನೆ, ಅಲಂಕಾರ, ತೀರ್ಥ ಪ್ರಸಾದ ಸೇವೆ ಜರುಗಿತು.
ನಗರದ ರಾಯರ ಮಠದಿಂದ ಶ್ರೀ ಸುಂಕದಕಟ್ಟೆ ಪ್ರಾಣದೇವರ ದೇವಾಲಯದವರೆಗೆ ಪಲ್ಲಕ್ಕಿ ಸೇವೆ ಹಮ್ಮಿಕೊಳ್ಳಲಾಗಿತ್ತು. ಆದೋನಿಯ ಸುಸ್ವರಂ ನಾಗೇಂದ್ರಕುಮಾರರಿಂದ ಶ್ರೀ ವಿಜಯವೈಭವ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಶ್ರೀ ವಿಜಯ ಕವಚ ಪಾರಾಯಣದ ಸಮಾರೋಪ ಹಿನ್ನೆಲೆಯಲ್ಲಿ ಚೀಕಲಪರ್ವಿಯ ಶ್ರೀ ವಿಜಯದಾಸರ ಕಟ್ಟೆಯ ಅರ್ಚಕ ರಾಮಾಚಾರ್ಯರಿಗೆ ವಿಜಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅಷ್ಟ್ಟಾವಧಾನ ಸೇವೆ ಮತ್ತು ಮಹಾಮಂಗಳಾರತಿ ನೆರವೇರಿತು.
ವಿಜಯದಾಸ ಭಕ್ತ ಮಂಡಳಿಯ ಕಾರ್ಯಕ್ರಮದ ಕುರಿತು ಎಚ್‌ಆರ್ ಸರೋಜಮ್ಮ ಪ್ರೌಢಶಾಲೆ ಉಪ ಪ್ರಾಚಾರ್ಯ ಲಕ್ಷ್ಮೀಕಾಂತ ಹೇರೂರು ಮಾತನಾಡಿದರು. ನಗರಸಭೆ ಸದಸ್ಯ ವಾಸುದೇವ ನವಲಿ, ವಿಪ್ರ ಸಮಾಜದ ಮುಖಂಡರಾದ ಸ್ವಾಮಿರಾವ್ ಹೇರೂರು, ವಿಷ್ಣು ತೀರ್ಥ, ಪ್ರಸನ್ನ ದೇಸಾಯಿ, ಕಾರ್ತೀಕ ದಿಗ್ಗಾವಿ, ಸತೀಶ ಕುಲ್ಕರ್ಣಿ, ಮಣಿಕಂಠ ಗರಗಟ್ಟಿ ಇತರರಿದ್ದರು.