

ಗಂಗಾವತಿ: ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಬಾರದ ತಾಲೂಕು ಮಟ್ಟದ ಅಧಿಕಾರಿಗಳ ವರ್ತನೆ ಖಂಡಿಸಿ ಕನ್ನಡಪರ ಸಂಘಟನೆಗಳು ಆಕ್ರೋಶವ್ಯಕ್ತಪಡಿಸಿದ್ದು, ತಹಸೀಲ್ದಾರ್ ಯು.ನಾಗರಾಜ್‌ರನ್ನು ಮಂಗಳವಾರ ತರಾಟೆ ತೆಗೆದುಕೊಂಡವು.
ತಾಪಂ ಮಂಥನ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ತಾಲೂಕಾಡಳಿತದಿಂದ ಪೂರ್ವಭಾವಿ ಸಭೆ ಆಯೋಜಿಸಿದ್ದು, ಅಧಿಕಾರಿಗಳು ಗೈರಾದ್ದರಿಂದ ನಿಗದಿಗಿಂತ ಒಂದು ಗಂಟೆ ತಡವಾಗಿ ಸಭೆ ಆರಂಭವಾಯಿತು. ಬಂದವರಲ್ಲಿ ಬಹುತೇಕ ಎಸ್‌ಡಿಎಗಳೇ ಇದಿದ್ದರಿಂದ ಕನ್ನಡ ಪರ ಸಂಘಟನೆಗಳ ಮುಂಡರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡದ ಬಗ್ಗೆ ಅಸಡ್ಡೆ ತೋರಿಸಿರುವ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ತಹಸೀಲ್ದಾರ್ ಯು.ನಾಗರಾಜ್‌ರನ್ನು ಪ್ರಶ್ನಿಸಿದರು. ಸ್ಪಷ್ಟ ಮಾಹಿತಿ ಬಾರದಿದ್ದರಿಂದ ಸಭೆ ಬಹಿಷ್ಕರಿಸಲು ನಿರ್ಧರಿಸಿದರು.
ಗೈರಾದ ಅಧಿಕಾರಿಗಳ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುವುದು ಎಂದು ತಹಸೀಲ್ದಾರ್ ಸಮಜಾಯಿಷಿ ನೀಡಿದ್ದರಿಂದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಕೈಬಿಟ್ಟವು.
ರಾಜ್ಯೋತ್ಸವನ್ನು ಅದ್ದೂರಿ ಮತ್ತು ಅರ್ಥಪೂರ್ಣ ಅಚರಿಸಬೇಕಿದ್ದು, ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಿ. ನಗರದ ಎಲ್ಲ ವೃತ್ತ ಮತ್ತು ಡಿವೈಡರ್‌ಗಳನ್ನು ತಳೀರು ತೋರಣಗಳಿಂದ ಅಲಂಕರಿಸಬೇಕು.
ಕನ್ನಡದ ಬಗ್ಗೆ ಪ್ರಬಂಧ, ಭಾಷಣ, ಏಕಪಾತ್ರಾಭಿನಯ ಸೇರಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ. ಭುವನೇಶ್ವರಿ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ನಂತರ ತಾಲೂಕು ಕ್ರೀಡಾಂಗಣದಲ್ಲಿ ಧ್ವಜಾರೋಹಣ, ಪಥ ಸಂಚಲನ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು.
ಒಂದೊಂದು ವ್ಯವಸ್ಥೆಯನ್ನು ಆಯಾ ಇಲಾಖೆಗಳಿಗೆ ವಹಿಸಲಾಗುತ್ತಿದ್ದು, ಜವಾಬ್ದಾರಿಯಿಂದ ನಿರ್ವಹಿಸಬೇಕು. ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ತಹಸೀಲ್ದಾರ್ ತಿಳಿಸಿದರು.
ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ಕನ್ನಡ ಪರ ಸಂಘಟನೆ ಪದಾಧಿಕಾರಿಗಳಾದ ಬಳ್ಳಾರಿ ರಾಮಣ್ಣನಾಯಕ, ಚನ್ನಬಸವ ಜೇಕಿನ್, ಪಂಪಣ್ಣನಾಯಕ, ರಮೇಶ ಕೋಟಿ, ವಿರೂಪಾಕ್ಷಗೌಡ ನಾಯಕ, ಎಂ.ಡಿ.ಅಲಿ, ಅರ್ಜುನನಾಯಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
ಜವಾಬ್ದಾರಿವಹಿಸಿಕೊಳ್ಳಲು ತಾಲೂಕು ಮಟ್ಟದ ಕೆಲ ಅಧಿಕಾರಿಗಳು ನಿರಾಕರಿಸುವ ಮೂಲಕ ಕನ್ನಡ ಮೇಲಿನ ನಿರಾಸಕ್ತಿ ವ್ಯಕ್ತಪಡಿಸಿದರು. ಅಬಕಾರಿ, ತೋಟಗಾರಿಕೆ ಯಾವುದೇ ಅನುದಾನವಿಲ್ಲ ಎಂದು ಹೇಳಿದರೆ, ಪ್ರತಿಬಾರಿಯೂ ನಾವೇ ಮಾಡಬೇಕೇ, ಬೇರೆ ಇಲಾಖೆಗೆ ವಹಿಸುವಂತೆ ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ನೇರವಾಗಿ ಹೇಳಿದರು. ಈ ಹಿಂದೆ ಯಾವ ಜವಾಬ್ದಾರಿ ನೀಡಿದ್ದೀರೋ ಅಷ್ಟೇ ಮಾಡ್ತೀವಿ ಎಂದು ಕೆಲ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಈ ಧೋರಣೆಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರೆ, ತಹಸೀಲ್ದಾರ್ ನಾಗರಾಜ್ ಅಸಹಾಯಕರಾದರು.
ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಣೆ