ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳಿ

MATADANA
ಗಂಗಾವತಿಯ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹೊಸ ಮತದಾರರ ನೋಂದಣಿ ಮತ್ತು ಪರಿಷ್ಕರಣೆ ಜಾಗೃತಿ ಅಭಿಯಾನದಲ್ಲಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಗುರುವಾರ ಮಾತನಾಡಿದರು. ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ, ಉಪತಹಸೀಲ್ದಾರ್ ಅಬ್ದುಲ್ ರಹೆಮಾನ್, ಚುನಾವಣೆ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ತಾಪಂ ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಇತರರಿದ್ದರು.
Published on

ಗಂಗಾವತಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೇ.100 ಮತದಾನವಾದರೆ ಸುಭದ್ರ ದೇಶ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ತಾಲೂಕು ಆಡಳಿತ, ಸ್ವೀಪ್ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಹೊಸ ಮತದಾರರ ನೋಂದಣಿ ಮತ್ತು ಪರಿಷ್ಕರಣೆ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಮತಕ್ಕೂ ಮೌಲ್ಯವಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತದಾನದ ಹಕ್ಕು ಪಡೆದುಕೊಳ್ಳಬೇಕು. ಪ್ರತಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳಬೇಕು. ಗುರುತಿನ ಚೀಟಿಯಲ್ಲಿ ತಿದ್ದುಪಡಿ ಇದ್ದರೆ ಸರಿಪಡಿಸಿಕೊಳ್ಳಬಹುದು. ಡಿ.9ರವರೆಗೆ ನೋಂದಣಿ ಮತ್ತು ಪರಿಷ್ಕರಣೆಗೆ ಅವಕಾಶವಿದೆ ಎಂದರು.

ಚುನಾವಣೆ ಶಿರಸ್ತೇದಾರ್ ರವಿಕುಮಾರ ನಾಯಕವಾಡಿ ಮಾತನಾಡಿ, ವೋಟರ್ ಹೆಲ್ಪ್‌ಲೈನ್ ಮೊಬೈಲ್ ಮೂಲಕ ನೋಂದಣಿಗೆ ಅವಕಾಶವಿದ್ದು, ಈಶಾನ್ಯ ಕರ್ನಾಟಕ ಪದವೀಧರರ ಚುನಾವಣೆಗೆ ಹೆಸರು ನೋಂದಾಯಿಸಿಕೊಳ್ಳಬೇಕು. 2020 ನವೆಂಬರ್ 1ಕ್ಕಿಂತ ಮುಂಚೆ ಪದವಿ ಪೂರ್ಣಗೊಳಿಸಿದವರು ಅಗತ್ಯ ದಾಖಲೆಗಳೊಂದಿಗೆ ತಹಸಿಲ್ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಮತದಾರರ ನೋಂದಣಿ ಅರ್ಜಿ ವಿತರಿಸಲಾಯಿತು. ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ, ಪ್ರಾಧ್ಯಾಪಕರಾದ ಜಗದೇವಿ ಕಲಶೆಟ್ಟಿ, ಡಾ.ರವಿಕಿರಣ, ಉಪತಹಸೀಲ್ದಾರ್ ಅಬ್ದುಲ್ ರಹೆಮಾನ್, ವಿಷಯ ನಿರ್ವಾಹಕರಾದ ಶ್ರೀಕಂಠೇಶ, ದುರಗೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net