

ಗಂಗಾವತಿ: ಆಹಾರ ವ್ಯರ್ಥ ಮಾಡದೆ ಹಸಿದವರಿಗೆ ನೀಡಬೇಕು ಎಂದು ಹಾಸ್ಯಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಸಮಾನ ಮನಸ್ಕರ ತಂಡ ಹಮ್ಮಿಕೊಂಡಿರುವ ಆಹಾರ ಚೆಲ್ಲಬೇಡಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಎಷ್ಟೋ ಜನಕ್ಕೆ ಆಹಾರದ ಕೊರತೆಯಿದ್ದು, ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಆಹಾರ ಸೇವಿಸದೇ ಕಸದ ಬುಟ್ಟಿಗೆ ಹಾಕಲಾಗುತ್ತಿದೆ. ಎಷ್ಟು ಬೇಕು ಅಷ್ಟೇ ಹಾಕಿಸಿಕೊಳ್ಳಬೇಕಿದ್ದು, ಯಾವುದೇ ಕಾರಣಕ್ಕೂ ಚಲ್ಲಬಾರದು. ಆಹಾರ ಬಡಿಸುವ ವ್ಯಕ್ತಿಗಳು ಬಲವಂತ ಮಾಡಬಾರದು. ಆಹಾರ ಉಳಿಸಿ, ಅಸಹಾಯಕರು ಮತ್ತು ಹಸಿದವರಿಗೆ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಭಿಯಾನದ ಪ್ರಮುಖ ಡಾ.ಶಿವಕುಮಾರ ಮಾಲಿಪಾಟೀಲ್, ಆಹಾರ ಚೆಲ್ಲಲು ನಿಮಿಷ ಸಾಕು, ಆದರೆ ಬೆಳೆಯಲು ವರ್ಷ ಬೇಕಾಗುವುದು. ಅಭಿಯಾನಕ್ಕಾಗಿ ಹಲವರು ಕೈಜೋಡಿಸಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಕಲ್ಯಾಣ ಮಂಟಪ ಸೇರಿ ಪ್ರಮುಖ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಳವಡಿಸಲಾಯಿತು. ಕಲ್ಯಾಣ ಮಂಟಪ ಮುಖ್ಯಸ್ಥ ರುದ್ರಪ್ಪ ಗಾಳಿ, ಚನ್ನಬಸವ ಸ್ವಾಮಿ ಮಠದ ಧರ್ಮದರ್ಶಿ ಕೆ.ಚನ್ನಬಸಯ್ಯಸ್ವಾಮಿ, ಅಭಿಯಾನದ ಪದಾಧಿಕಾರಿಗಳಾದ ಆನಂದ ಅಕ್ಕಿ, ಪ್ರದೀಪ, ರಮೇಶ ಗಬ್ಬೂರ್, ಹರನಾಯಕ, ಪ್ರಲ್ಹಾದ ಕುಲಕರ್ಣಿ, ನೀಲಕಂಠಪ್ಪ ನಾಗಶೆಟ್ಟಿ, ಮೈಲಾರಪ್ಪ ಬೂದಿಹಾಳ್, ಅಶೋಕ ಗುಡಿಕೋಟಿ ಇತರರಿದ್ದರು.