ಗಂಗಾವತಿ: ರಾಷ್ಟ್ರೀಯ ಸ್ವಾಭಿಮಾನ ಅಂದೋಲನದಿಂದ ಹಮ್ಮಿಕೊಂಡಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಬೆಂಬಲ ನೀಡಲಾಗುವುದು ಎಂದು ಸೌಹಾರ್ದ ಸಹಕಾರಿ ಸಂಘಗಳ ಬಳಗ ತಾಲೂಕು ಘಟಕದ ಅಧ್ಯಕ್ಷ ಸುಧಾಕರ ಕಲ್ಮನಿ ಹೇಳಿದರು.
ನಗರದ ಗಾಲಿಶ್ರೀ ಸಹಕಾರಿ ಸಂಘದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಹೊಸಪೇಟೆ ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ಕಲುಷಿಗೊಳ್ಳುತ್ತಿದೆ. ಗಂಗಾ ಸ್ನಾನ, ತುಂಗಾ ಪಾನ ಎಂಬ ನಾಡ್ನುಡಿ ಸುಳ್ಳಾಗುತ್ತಿದೆ. ಕಾರ್ಖಾನೆ ತ್ಯಾಜ್ಯ ನದಿಗೆ ಸೇರುತ್ತಿದ್ದು, ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೂ ಬಳಸಲು ಯೋಗ್ಯವಲ್ಲ. ನಿರ್ಮಲ ತುಂಗಭದ್ರಾ ಅಭಿಯಾನ ಸಮಯೋಚಿತವಾಗಿದ್ದು, ಸಂಘದಿಂದ ಬೆಂಬಲಿಸಲಾಗುವುದು. ರಥಯಾತ್ರೆ, ಪಾದಯಾತ್ರೆ ಮತ್ತು ಸಮಾರೋಪದಲ್ಲಿ ಸಂಘದ ಸದಸ್ಯರು ಜಲಸಂಕಲ್ಪದೊಂದಿಗೆ ಭಾಗವಹಿಸಲಿದ್ದಾರೆ ಎಂದರು.
ಪದಾಧಿಕಾರಿಗಳಾದ ಎಂ.ಶಾಂತಮೂರ್ತಿ, ಕಲ್ಯಾಣ ಬಸವ ಷಣ್ಮುಖಪ್ಪ ಕುರಗೋಡು, ಸತೀಶ, ಶಾಂತಯ್ಯ ಹಿರೇಮಠ, ಮೌನೇಶ, ವಸಂತ್ ಹಾದಿಮನಿ, ಎಂ.ನರಸಿಂಹ ಕುಲ್ಕರ್ಣಿ, ಕೆ.ಮಲ್ಲಿಕಾರ್ಜುನ, ಲಿಂಗರಾಜ, ಸಂತೋಷ ಲಂಕೆ, ರಾಘವೇಂದ್ರ, ಮಹಾಬಳೇಶ ಪಟ್ಟಣಶೆಟ್ಟಿ ಇತರರಿದ್ದರು.