

ಶಿವಮೊಗ್ಗ: ಹಿರಿಯರ ಆತ್ಮಕ್ಕೆ ಮುಕ್ತಿ ನೀಡಲು ಅತ್ಯಂತ ಪವಿತ್ರಳಾದ ದೇವಗಂಗೆಯನ್ನು ಧರೆಗಿಳಿಸಿ, ನಮ್ಮೆಲ್ಲರನ್ನೂ ಪವಿತ್ರಗೊಳಿಸಿದವರು ಭಗೀರಥ ಮಹರ್ಷಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.
ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಪ್ಪಾರ ಸಮಾಜದಿಂದ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿದರು. ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ. ನಿರ್ಜೀವ ವಸ್ತುಗಳಿಗೂ ಸಂಸ್ಕಾರ ನೀಡಿದವರು. ಪಿತೃಗಳಿಗೆ ಶಕ್ತಿ ಕೊಡುವ ಸಲುವಾಗಿ ಗಂಗೆಯನ್ನು ಧರೆಗಿಳಿಸಿ ನಮ್ಮೆಲ್ಲರ ಪಾಪ ಕಳೆಯುವ ಶ್ರೇಷ್ಠ ಕೆಲಸ ಮಾಡಿದರು. ಕಲುಷಿತವನ್ನೂ ಪವಿತ್ರಗೊಳಿಸುವುದು ಗಂಗೆ ಮಾತ್ರ. ಇದು ಭಗೀರಥ ಪ್ರಯತ್ನದ ಪರಿಣಾಮ ಎಂದರು. ಬಿಹಾರದ ಸಾಮಾನ್ಯ ವ್ಯಕ್ತಿ ದಶರಥ ಮಾಂಝಿ ಗುಡ್ಡ ಕಡಿದು ರಸ್ತೆ ಮಾಡುತ್ತಾನೆ. ಅನೇಕ ಜೀವರಾಶಿಗಳ ಉಳಿವಿಗೆ ಕಾರಣನಾಗುತ್ತಾನೆ. ಇದು ಭಗೀರಥ ಪ್ರಯತ್ನಕ್ಕೆ ಸಾಕ್ಷಿ. ಉಪ್ಪಾರ ಸಮಾಜ ಸಣ್ಣದಲ್ಲ. ಪವಿತ್ರ ಗಂಗೆಯನ್ನೇ ನೀಡಿದ ಸಮಾಜ. ಎಲ್ಲ ಸಣ್ಣ ಸಮಾಜಗಳು ಒಟ್ಟಾಗಿದ್ದಾಗ ಇಡೀ ಸಮಾಜಕ್ಕೆ ಶಕ್ತಿ ಬರುತ್ತದೆ. ಭಗೀರಥ ಪ್ರಯತ್ನದ ಮೂಲಕವೇ ಸಮಾಜವನ್ನು ಇನ್ನೂ ಉತ್ತಮ ರೀತಿಯಲ್ಲಿ ಕಟ್ಟಿ, ಶ್ರೇಷ್ಠ ಕೊಡುಗೆಗಳನ್ನು ನೀಡಬೇಕಿದೆ ಎಂದು ಸಲಹೆ ನೀಡಿದರು. ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಸಂಘದ ಖಜಾಂಚಿ ನಾಗರಾಜ ಕಂಕಾರಿ, ಶಿವಮೊಗ್ಗ ತಹಸೀಲ್ದಾರ್ ರಾಜೀವ್, ಸಮಾಜದ ಮುಖಂಡ ಎಸ್.ಪಿ.ಶೇಷಾದ್ರಿ ಇತರರಿದ್ದರು.
ರಾಮನ ಕುಲದಲ್ಲಿ ಹುಟ್ಟಿದ ನಾವು ನಂತರದ ದಿನಗಳಲ್ಲಿ ತಮ್ಮ ಕುಲ ಕಸುಬಿನಿಂದ ಗುರುತಿಸಲ್ಪಡುತ್ತ, ಮಣ್ಣಿನ ಕೆಲಸ, ಕೆರೆ ಕಟ್ಟೆ, ಮನೆ ಕಟ್ಟುವ ಕೆಲಸದಲ್ಲಿ ತೊಡಗಿ ಶ್ರಮಜೀವಿಗಳಾದೆವು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಬೇಕು. ಶೈಕ್ಷಣಿಕ, ಸಾಮಾಜಿಕವಾಗಿ ಬೆಳೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ನಮ್ಮ ಶಕ್ತಿಯನ್ನು ನಾವು ತಿಳಿಯಬೇಕು. - ಎಸ್.ಟಿ.ಹಾಲಪ್ಪ, ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ