

ಬೈಂದೂರು: ಜನರಲ್ಲಿ ಒಗ್ಗಟ್ಟು, ದೇಶಾಭಿಮಾನ, ನಮ್ಮ ಧರ್ಮ ಹಾಗೂ ಸಂಸ್ಕೃತಿ ಅಭ್ಯುದಯಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಹುಟ್ಟಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಮೂಲ ಆಶಯ ಕಳೆಗುಂದುತ್ತಾ ಧರ್ಮದ ಉಳಿವಿಗೆ ಹೋರಾಡಬೇಕಿದೆ. ಹಿರಿಯರು ಮಕ್ಕಳಿಗೆ ಧರ್ಮ, ಸಂಸ್ಕೃತಿ, ಆಚರಣೆ, ಒಳ್ಳೆಯ ಸಂಸ್ಕಾರ ಹೇಳುವುದರ ಮೂಲಕ ಧರ್ಮ ರಕ್ಷಣೆ ಮಾಡಬೇಕಿದೆ ಎಂದು ಲಾವಣ್ಯದ ಹಿರಿಯ ರಂಗಕರ್ಮಿ ಬಿ.ಗಣೇಶ ಕಾರಂತ ಹೇಳಿದರು.
ಪಡುವರಿ ಗ್ರಾಮದ ಜೋಗೂರು ಈಶ್ವರ ಮತ್ತು ಶಂಕರನಾರಾಯಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ 15ನೇ ವರ್ಷದ ಗಣೇಶೋತ್ಸವ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಧುಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಕೆ.ಪಿ.ನಂಬಿಯಾರ್ ಉದ್ಘಾಟಿಸಿದರು. ಯೋಗಗುರು ಗೋವಿಂದ ಗುರೂಜಿ ಭಟ್ಕಳ ಅವರನ್ನು ಸನ್ಮಾನಿಸಲಾಯಿತು. ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಸಾಹಿತಿ ಹಾಗೂ ನಿವೃತ್ತ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಶೆಟ್ಟಿ, ಶ್ರೀ ಈಶ್ವರ ಮತ್ತು ಶ್ರೀ ಶಂಕರ ನಾರಾಯಣ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಇದ್ದರು.
ಸ್ನೇಹಾ ರವಿ ಪೂಜಾರಿ ಪ್ರಾರ್ಥಿಸಿ, ಅಣ್ಣಪ್ಪ ಜೋಗೂರು ಸ್ವಾಗತಿಸಿದರು. ಸುರೇಶ ಹಣಬರ ಪ್ರಾಸ್ತಾವಿಕ ಮಾತನಾಡಿದರು. ರವಿ ಪೂಜಾರಿ ವಂದಿಸಿದರು. ರಾಜೇಶ ತೊಂಡೆಮಕ್ಕಿ ನಿರೂಪಿಸಿದರು. ನಂತರ ಸಾಧನಾ ಕಲಾ ತಂಡ ಸಾಸ್ತಾನ ಅವರಿಂದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನಗೊಂಡಿತು.