ಕಲಾಕಾರನಾದ ಬ್ಯಾಂಕ್ ಪ್ರಬಂಧಕ : ಮ್ಯಾನೇಜರ್ ಕರ ಕೌಶಲದಲ್ಲಿ ಮೃಣ್ಮಯ ಗಣಪನ ವಿಗ್ರಹ

ganapa
Published on

ರತ್ನಾಕರ ಸುಬ್ರಹ್ಮಣ್ಯ

ಸುಬ್ರಹ್ಮಣ್ಯ: ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರೂ ಸುಮಾರು ಮೂವತ್ತೈದು ವರ್ಷಗಳಿಂದ ಗ್ರಾಮೀಣ ಪ್ರದೇಶ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೃಣ್ಮಯ ಗಣಪನ ಮೂರ್ತಿ ನಿರ್ಮಿಸಿ ಕೊಟ್ಟು ಕೃಷ್ಣಪ್ರಸಾದ್ ಎಂಬುವರು ಪ್ರಸಿದ್ಧರಾಗಿದ್ದಾರೆ.

24 ವರ್ಷದಿಂದ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು ಪ್ರಸ್ತುತ ನಾಗಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಯಾವ ವರ್ಷವೂ ಗಣಪತಿ ಮೂರ್ತಿ ರಚನೆ ಬಿಟ್ಟುಕೊಟ್ಟಿಲ್ಲ. ಇದು ಗಣೇಶನಿಗೆ ಮತ್ತು ತನ್ನೂರಿಗೆ ಸಲ್ಲಿಸುವ ಸೇವೆ ಎಂದು ನೆರವೇರಿಸುತ್ತಾ ಬಂದಿದ್ದಾರೆ. ಈ ಸಲವೂ ಬ್ಯಾಂಕ್‌ಗೆ ರಜೆ ಮಾಡಿ ಹುಟ್ಟೂರಿಗೆ ಆಗಮಿಸಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

29 ವರ್ಷದಿಂದ ಸಾರ್ವಜನಿಕ ಗಣಪ

ಪ್ರತಿವರ್ಷ ಸುಬ್ರಹ್ಮಣ್ಯ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸುವ ಗಣಪತಿಯನ್ನು 29 ವರ್ಷಗಳಿಂದ ರಚಿಸಿಕೊಡುತ್ತಿದ್ದಾರೆ. ಇದು ಇವರು ತಯಾರಿಸುವ ಅತಿ ದೊಡ್ಡ ಮಣ್ಣಿನ ವಿಗ್ರಹವಾಗಿದೆ. ಈ ವರ್ಷ 54ನೇ ವರ್ಷದ ವಿಗ್ರಹ ತಯಾರಿಸುತ್ತಿದ್ದಾರೆ.

ಮಣ್ಣಿನಲ್ಲಿ ಕಲಾತ್ಮಕ ಸೃಷ್ಟಿ

ಯಾವುದೇ ಪೇಪರ್ ಉಪಯೋಗಿಸದೆ ಮಣ್ಣಿನ ಟೊಳ್ಳಾದ ಆಕೃತಿ ರಚಿಸಿ ವಿಗ್ರಹಕ್ಕೆ ಮೂರ್ತ ರೂಪ ನೀಡುತ್ತಾರೆ. ಪರಿಸರಕ್ಕೆ ಯಾವುದೇ ತೊಂದರೆ ಉಂಟಾಗಬಾರದೆಂದು ರಾಸಾಯನಿಕ ಪೈಂಟ್ ಬಳಕೆಯನ್ನು ಕೃಷ್ಣ ನಿಲ್ಲಿಸಿದ್ದಾರೆ. ಗರಿಕೆ ಹುಲ್ಲಿನಿಂದ ತಯಾರಿಸಿದ ಪರಿಸರ ಸ್ನೇಹಿ ಬಣ್ಣವನ್ನು ಗಣಪನಿಗೆ ಹಚ್ಚುತ್ತಾರೆ.

ಈ ಹಿಂದೆ ಕೃಷ್ಣಪ್ರಸಾದ್ ರಚಿಸಿದ ಗಣಪನ ವಿಗ್ರಹ.
ಈ ಹಿಂದೆ ಕೃಷ್ಣಪ್ರಸಾದ್ ರಚಿಸಿದ ಗಣಪನ ವಿಗ್ರಹ.

ಗುರುವಿಲ್ಲದ ವಿದ್ಯೆ

ಎಳವೆಯಲ್ಲಿ ತಂದೆ ಪದ್ಮನಾಭ ಭಟ್ ಹಾಗೂ ಸಹೋದರ ವಾಸುದೇವ ಭಟ್ ತಯಾರಿಸುತ್ತಿದ್ದ ಮೃಣ್ಮಯ ಗಣಪತಿ ವಿಗ್ರಹ ನೋಡಿ ತಾನೂ ವಿಗ್ರಹ ರಚನಾ ಕಾರ್ಯಕ್ಕೆ ಮುಂದಾಗಿದ್ದರು. ಬಳಿಕ ಆ ಕಾಲದಲ್ಲಿ ಕುಕ್ಕೆ ದೇವಳದಲ್ಲಿ ವಿಗ್ರಹ ರಚನೆ ಮಾಡುತ್ತಿದ್ದ ಗೋಪಿ ಕಿಟ್ಟಣ್ಣ ಅವರಿಗೆ ಸಹಾಯಕನಾಗಿ ಕಲಿತರು. ಈಗ ಅವರಿಗೆ ಸಹೋದರ ವಾಸುದೇವ ಭಟ್ ಸಹಾಯ ಮಾಡುತ್ತಿದ್ದಾರೆ.

ಸಂಭಾವನೆಯಿಲ್ಲ, ಭಕ್ತಿಯೇ ಪ್ರಧಾನ

ಎಳವೆಯಲ್ಲಿಯೇ ಸುಬ್ರಹ್ಮಣ್ಯ ಮಠದ ಗಣಪತಿ ರಚಿಸುವ ಕಾರ್ಯ ಕೈಗೆತ್ತಿಕೊಂಡು ಮಠದ ಗಣಪನ ಮೂರ್ತಿ ರಚನಾ ಕಾರ್ಯ ಮಾಡತೊಡಗಿದರು. ಮಠದಲ್ಲಿ ಕೃಷ್ಣರೂಪಿ, ರಾಮರೂಪಿ, ನಾಗರೂಪಿ, ನರಸಿಂಹ ರೂಪಿ, ಶಿಲಾರೂಪಿ ಗಣಪನ ವಿಗ್ರಹ ರಚಿಸಿದ್ದಾರೆ. ಬಣ್ಣ ರಹಿತ ಮಡಿ ಗಣಪತಿ ಕೂಡಾ ರಚಿಸಿದ್ದರು. ಕಳೆದ ಮೂವತ್ತೈದು ವರ್ಷಗಳಿಂದ ಗಣಪನ ವಿಗ್ರಹ ರಚನಾ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಗಣಪತಿ ಮೂರ್ತಿ ರಚಿಸುವ ಅದಮ್ಯ ಹವ್ಯಾಸ ಹೊಂದಿರುವ ಇವರು ತಮ್ಮ ಕಾಯಕಕ್ಕೆ ಯಾವುದೇ ಸಂಭಾವನೆ ಪಡೆಯುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net