

| ಹರ್ಷವರ್ಧನ್ ಬ್ಯಾಡನೂರು
‘ಗಾಳಿಪಟ’ದ ಗಲಾಟೆ ಗ್ಯಾಂಗ್ ಮತ್ತೆ ವಾಪಸ್ಸಾಗಿದೆ. ಇಂದಿನಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲು ರೆಡಿಯಾಗಿದೆ. ಇದೇ ಖುಷಿಯಲ್ಲಿ ನಟ ಗಣೇಶ್ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕಿದ್ದಾರೆ. ಚಿತ್ರ, ತಮ್ಮ ಪಾತ್ರ, ಹಾಡುಗಳು, ಚಿತ್ರೀಕರಣ ಹೀಗೆ ಹಲವು ವಿಷಯಗಳ ಬಗ್ಗೆ ಹಂಚಿಕೊಂಡಿದ್ದಾರೆ.
14 ವರ್ಷಗಳ ಬಳಿಕ ‘ಗಾಳಿಪಟ’ ಮುಂದುವರಿದ ಭಾಗ ಬರುತ್ತಿರುವ ಬಗ್ಗೆ, ‘‘ಗಾಳಿಪಟ 2’ ಪರ್ಫೆಕ್ಟ್ ಸೀಕ್ವಲ್. ಅದೇ ಗಣಿ ಪಾತ್ರದಲ್ಲಿ ನಾನಿದ್ದೇನೆ. ನನ್ನ ತಂದೆ, ತಾಯಿಯಾಗಿ ರಂಗಾಯಣ ರಘು ಸರ್ ಮತ್ತು ಸುಧಾ ಬೆಳವಾಡಿಯವರೇ ಇದ್ದಾರೆ. ಜತೆಗೆ ಮೂವರು ಗೆಳೆಯರು. ಗೆಳೆತನ ಎಂಬುದು ಎಲ್ಲರ ಜೀವನದಲ್ಲೂ ಇರುತ್ತೆ. ಇಷ್ಟೇ ವಯಸ್ಸಿನಲ್ಲಿ ಫ್ರೆಂಡ್ಶಿಪ್ ಆಗಬೇಕು ಅಂತೇನಿಲ್ಲ. ಆದರೆ, ಶಾಲೆ-ಕಾಲೇಜು ದಿನಗಳಲ್ಲಾದ ಗೆಳೆತನವನ್ನು ಯಾರೂ ಮರೆಯಲ್ಲ. ಏಕೆಂದರೆ, ಅವರು ನಮ್ಮ ಮೊದಲ ಫ್ರೆಂಡ್ಸ್ ಆಗಿರುತ್ತಾರೆ. ಇಲ್ಲಿ ಎಮೋಷನ್ಸ್, ಲವ್, ಜರ್ನಿ ಎಲ್ಲವೂ ಇದೆ’ ಎನ್ನುತ್ತಾರೆ.
‘ಗಾಳಿಪಟ 2’ನಲ್ಲಿ ಎಲ್ಲ ತರಹದ ಹಾಡುಗಳ ಮಿಶ್ರಣವಿದೆ ಎನ್ನುವ ಗಣೇಶ್, ‘‘ಗಾಳಿಪಟ’ ಚಿತ್ರದಲ್ಲಿ ಅಂದಿನ ಸಮಯಕ್ಕೆ, ಟ್ರೆಂಡ್ಗೆ ತಕ್ಕಂತೆ ಹಾಡುಗಳಿದ್ದವು. ‘ಗಾಳಿಪಟ 2’ ಚಿತ್ರದಲ್ಲಿ ಇವತ್ತಿನ ಟ್ರೆಂಡ್ಗೆ ತಕ್ಕಂತೆ ಹಾಡುಗಳಿವೆ. ‘ಪ್ರಾಯಶಃ’, ‘ನಾನಾಡದ ಮಾತು’ ‘ದೇವ್ಲೆ ದೇವ್ಲೆ’ ... ಹೀಗೆ ಇಲ್ಲಿ ಎಲ್ಲ ಬಗೆಯ ಮಿಶ್ರಣವಿದೆ’ ಎಂದು ಮಾಹಿತಿ ನೀಡುತ್ತಾರೆ.
ನಿರ್ದೇಶಕ ಯೋಗರಾಜ್ ಭಟ್ ಮತ್ತು ಗಣೇಶ್ ಅವರ ಗೆಳೆತನ ‘ಮುಂಗಾರು ಮಳೆ’ಯಿಂದ ‘ಗಾಳಿಪಟ 2’ವರೆಗೂ ದಿನಕಳೆದಂತೆ ಗಟ್ಟಿಯಾಗುತ್ತಲೇ ಬಂದಿದೆ. ಈ ಸ್ನೇಹದ ಬಗ್ಗೆ ಮಾತನಾಡುವ ಗಣೇಶ್, ‘ನಮ್ಮ ನಡುವೆ ಒಳ್ಳೆ ಬಾಂಡಿಂಗ್ ಇದೆ. ‘ಗಾಳಿಪಟ’ ಬಳಿಕ ‘ಮುಗುಳುನಗೆ’ವರೆಗೂ ಅವರ ಜತೆ ಸಿನಿಮಾನೇ ಮಾಡಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಕರೆ ಮಾಡುತ್ತಿದ್ದೆ. ಯಾವಾಗಾದರೂ ಸಿಕ್ಕಾಗ, ‘ಏನ್ ಭಟ್ರೇ ಯಾವಾಗ ಸಿನಿಮಾ’ ಅಂತ ಮಾತನಾಡುತ್ತಿದ್ದೆವು. ಆದರೆ, ಎಲ್ಲದಕ್ಕೂ ಸಮಯ ಕೂಡಿ ಬರಬೇಕಲ್ಲಾ? ಅವರಿಗೆ ಅವರದೇ ಆದ ಕಮಿಟ್ವೆುಂಟ್ಸ್ ಇತ್ತು. ನನಗೂ ನನ್ನದೇ ಆದ ಕೆಲಸಗಳಿದ್ದವು. ಆದರೆ ‘ಮುಗುಳುನಗೆ’ ಸಮಯದಲ್ಲಿ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಮಾತನಾಡಿಕೊಂಡಿದ್ದೆವು. ಅದೀಗ ‘ಗಾಳಿಪಟ 2’ ಆಗಿ ಮೂಡಿಬಂದಿದೆ’ ಎನ್ನುತ್ತಾರೆ.
ಇನ್ನು, ಕರೋನಾ ಲಾಕ್ಡೌನ್ ನಡುವೆಯೇ ಕಜಕಿಸ್ತಾನದಲ್ಲಿ ಚಿತ್ರೀಕರಣಕ್ಕೆ ಹೋಗಿದ್ದರ ಅನುಭವ ಬಿಚ್ಚಿಡುವ ಅವರು, ‘ಕಜಕಿಸ್ತಾನದಲ್ಲಿ - 20, - 22 ತಾಪಮಾನವಿರುತ್ತಿತ್ತು. ನೋಡೋಕೆ ಚಂದ. ಕಾರಿನಲ್ಲಿ ಹೋಗುವಾಗ ಸುತ್ತಮುತ್ತ ಪರಿಸರ ನೋಡಿ, ಆಹಾ... ಎಷ್ಟು ಸುಂದರವಾಗಿದೆ. ಸ್ವರ್ಗ ಅಂತ ಮಾತನಾಡಿಕೊಳ್ಳುತ್ತಿದ್ದೆವು. ಆದರೆ ಕಾರಿನಿಂದ ಇಳಿಯುತ್ತಿದ್ದಂತೆ ನರಕ. ಆದರೆ, ಚಿತ್ರೀಕರಣದ ವೇಳೆ ಎಂಜಾಯ್ ಮಾಡಿದೆವು’ ಎಂದು ಹೇಳಿಕೊಳ್ಳುತ್ತಾರೆ. ‘ಸ್ನೇಹ, ಪ್ರಯಾಣ, ಪ್ರೀತಿ, ಎಮೋಷನ್... ‘ಗಾಳಿಪಟ’ ಚಿತ್ರದಲ್ಲಿ ಎಷ್ಟಿತ್ತೋ, ‘ಗಾಳಿಪಟ 2’ನಲ್ಲಿ ಅದಕ್ಕಿಂತ ಡಬಲ್ ಇದೆ. ಪ್ರೇಕ್ಷಕರಿಗೆ ಇಷ್ಟವಾಗುವ ಭರವಸೆಯಿದೆ’ ಎಂದು ಮಾತು ಮುಗಿಸುತ್ತಾರೆ.