ಗಾಂಧಿ-ಶಾಸ್ತ್ರಿ ಜಯಂತಿ ಆಚರಣೆ, ಚರಕ ನೂಲುವ ಮೂಲಕ ಉದ್ಘಾಟನೆ, ಮಹಾತ್ಮರ ತತ್ವಾದರ್ಶಗಳು ಅನುಕರಣೀಯ ಎಂದ ಡಿಸಿ ಡಾ.ಆನಂದ ಕೆ

GANDHI JAYANTI IN GANDHI BHAVANA
ವಿಜಯಪುರ ನಗರದ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಚರಕ ನೇಯುವ ಮೂಲಕ ಉದ್ಘಾಟಿಸಿದರು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಡಿಸಿ ಸೋಮನಿಂಗ ಗೆಣ್ಣೂರ, ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಜೀವನದ ತತ್ವಗಳಂತೆ ನಡೆದು ಈ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು ಈ ದೇಶಕ್ಕೆ ತಮ್ಮ ಸಂದೇಶದ ಮೂಲಕ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ದೇಶದ ಈ ಮಹಾನ್ ವ್ಯಕ್ತಿಗಳ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ, ಸತ್ಯ, ಅಹಿಂಸಾ, ಸರಳತೆಯ ತತ್ವಾದರ್ಶಗಳು ಹಾಗೂ ಅವರ ಜೀವನದ ಸಂದೇಶ ಮೌಲ್ಯಗಳು ನಮಗೆ ಪ್ರೇರಣೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ .ಕೆ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆಯನ್ನು ಚರಕ ನೇಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ಮಹನೀಯರ ಕುರಿತು ಇಂದಿನ ಯುವಕರು ಅಧ್ಯಯನ ಮಾಡುವ ಮೂಲಕ ಅವರ ಚಿಂತನೆಗಳನ್ನು ಹಾಗೂ ಅವರ ಬದುಕನ್ನು ಅರಿಯಬೇಕಾಗಿದೆ. ಎಂದೆಂದಿಗೂ ಅವರ ಕಾರ್ಯ ಸಾಧನೆಯ ಮೇರು ಆದರ್ಶ ವ್ಯಕ್ತಿತ್ವ, ಅವರ ಚಿಂತನೆ, ನಂಬಿದ್ದ ತತ್ವಾದರ್ಶಗಳು ದೇಶದ ನಾಗರಿಕರಿಗೆ ಅಚ್ಚಳಿಯದೇ ನೆನಪಿನಲ್ಲುಳಿದಿವೆ. ಗಾಂಧೀಜಿಯವರು ಸತ್ಯ, ಅಹಿಂಸೆ ಮೂಲಕ ಕೈಗೊಂಡ ಸತ್ಯಾಗ್ರಹ ಬಲಿಷ್ಠ ಮಾನವ ಸಂಪನ್ಮೂಲ ಹೊಂದಿದ್ದ ಬ್ರಿಟಿಷರ ತಲೆಬಾಗಿಸಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರು ಚಿಂತನೆಗಳ ಜೊತೆಗೆ ಸತ್ಯಾಗ್ರಹ ನಡೆಸಿದ್ದರು. ಸತ್ಯಾಗ್ರಹದ ಮೂಲಕ ಸ್ವದೇಶಿ ತತ್ವ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ತತ್ವಗಳಿಂದ ಜನರಿಗೆ ತಿಳಿಯುವ ಹಾಗೂ ಜನರಿಗೆ ಮನಮುಟ್ಟುವ ವಿಚಾರಗಳನ್ನು ತಿಳಿಸುತ್ತಿದ್ದರು. ಅಸಹಕಾರ ಚಳುವಳಿ, ಸ್ವದೇಶಿ ವಸ್ತುಗಳ ಬಳಕೆಯ ಕುರಿತು ಮಹತ್ವ ಸಾರಿದರು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಮಾತನಾಡಿ, ಗಾಂಧೀಜಿಯವರನ್ನು ಇಡೀ ಜಗತ್ತು ಗೌರವಿಸುತ್ತದೆ. ಸತ್ಯವೇ ದೇವರು ಎಂಬುದನ್ನು ಗಾಂಧೀಜಿ ತಿಳಿಸಿದರು. ಪ್ರಾಮಾಣಿಕೆ ಹಾಗೂ ನೈತಿಕತೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ವಿಶ್ವಸಂಸ್ಥೆಯು ವಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಅಹಿಂಸಾ ದಿನಾಚರಣೆಯನ್ನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿರುವುದು ವಿಶ್ವ ಅವರನ್ನು ಗೌರವಿಸುವ ಪರಿಯಾಗಿದೆ ಎಂದು ಹೇಳಿದರು.

ಸಂಗಮೇಶ ಮೇತ್ರಿ ಉಪನ್ಯಾಸ ನೀಡುತ್ತಾ, ಔದ್ಯೋಗಿಕರಣದ ಈ ಯುಗದಲ್ಲಿ ಗಾಂಧೀಜಿ ಚಿಂತನೆ ಬಹು ಪ್ರಸ್ತುತವಾಗಿವೆ. ಯುವಜನರು ದಾರ್ಶನಿಕರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಗಾಂಧೀಜಿಯವರ ಸತ್ಯ ಮತ್ತು ಪ್ರೇಮ ಇವೆರಡು ವಿಚಾರ ಅನುಸರಿಸೋಣ. ಗಾಂಧೀಜಿಯವರು ಸತ್ಯ, ಪ್ರಾಮಾಣಿಕತೆಯನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಂಡಿದ್ದರು. ಗಾಂಧೀಜಿವರು ಬಹಳ ಸ್ವಾಭಿಮಾನಿಯಾಗಿದ್ದ ಅವರು, ಸ್ವಚ್ಛತೆಯನ್ನು ಬಹು ಅದ್ಯತೆಯನ್ನಾಗಿಸಿದ್ದರು ಎಂದು ತಿಳಿಸಿದರು.

ಕವಿತಾ ಕಲ್ಯಾಣಪ್ಪಗೋಳ ಅವರು ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಕುರಿತು ಉಪನ್ಯಾಸ ನೀಡುತ್ತಾ, ಸರಳತೆ, ಸಜ್ಜನಿಕೆ, ಸಹಿಷ್ಣುತೆ, ಪ್ರಾಮಾಣಿಕತೆ, ಸ್ವಾಭಿಮಾನಿ, ಕುಶಾಗ್ರಮತಿಯಾಗಿದ್ದ ಶಾಸ್ತ್ರಿ ಅವರು ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ ಸ್ವಾವಲಂಬಿ ಜೀವನದೊಂದಿಗೆ ಆದರ್ಶದ ಬದುಕು ಸಾಗಿಸಿದರು. ತಮ್ಮ ಸರಳತೆ, ಆದರ್ಶ ವಿಚಾರಗಳಿಂದ ಅವರು ಇಂದಿಗೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ರೈತರಿಗೆ ಮಾದರಿಯಾಗಿದ್ದಾರೆ ಎಂದರು.

ಎಸ್‌ಪಿ ಲಕ್ಷ್ಮಣ ನಿಂಬರಗಿ, ಗುರುನಾಥ ದಡ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ್ ಡಂಬಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಹೊಸಮನಿ, ಜಿಪಂ ಉಪ ಕಾರ್ಯದರ್ಶಿ ಸಿ.ಬಿ. ಕುಂಬಾರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ವಿಜಯಪುರ ತಹಸೀಲ್ದಾರ್ ಪ್ರಶಾಂತ ಚನಗೊಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮಹಿಳಾ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಶಂಕರಗೌಡ ಸೋಮನಾಳ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎ.ಐ. ಹಂಜಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net