ಮಹಿಳೆಯರ ಶಾರೀರಿಕ ರಚನೆ, ಹಾರ್ಮೋನುಗಳ ಏರುಪೇರು ಮತ್ತು ಜೀವನಶೈಲಿಯಿಂದಾಗಿ ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡುತ್ತವೆ. ಇವುಗಳ ಬಗ್ಗೆ ಸರಿಯಾದ ಜಾಗೃತಿ ಇದ್ದರೆ ಆರಂಭಿಕ ಹಂತದಲ್ಲೇ ತಡೆಗಟ್ಟಬಹುದು.
ಸ್ತನ ಕ್ಯಾನ್ಸರ್
ಸ್ತನ ಕ್ಯಾನ್ಸರ್ ಪುರುಷರಿಗೂ ಬರಬಹುದಾದರೂ, ಮಹಿಳೆಯರಲ್ಲಿ ಇದರ ಪ್ರಮಾಣ ಅತಿ ಹೆಚ್ಚು. ಹಾರ್ಮೋನುಗಳ ಬದಲಾವಣೆ ಮತ್ತು ಸ್ತನ ಅಂಗಾಂಶಗಳ ರಚನೆಯಿಂದಾಗಿ ಮಹಿಳೆಯರು ಈ ರೋಗಕ್ಕೆ ಹೆಚ್ಚು ತುತ್ತಾಗುತ್ತಾರೆ.
ಮೂಳೆ ಸವಕಳಿ
ವಯಸ್ಸಾದಂತೆ ಮಹಿಳೆಯರಲ್ಲಿ ಮೂಳೆಗಳು ದುರ್ಬಲಗೊಂಡು ಬೇಗನೆ ಮುರಿಯುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಋತುಬಂಧದ ನಂತರ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಕಡಿಮೆಯಾಗುವುದರಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತದೆ.
ಥೈರಾಯ್ಡ್ ಸಮಸ್ಯೆಗಳು
ಥೈರಾಯ್ಡ್ ಗ್ರಂಥಿಯು ದೇಹದ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಗಳು ಸುಮಾರು 5 ರಿಂದ 8 ಪಟ್ಟು ಹೆಚ್ಚು. ಇದು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಿ ತೂಕ ಹೆಚ್ಚಳ ಅಥವಾ ಮುಟ್ಟಿನ ಸಮಸ್ಯೆಯನ್ನು ಉಂಟುಮಾಡುತ್ತದೆ.
ಮೂತ್ರನಾಳದ ಸೋಂಕು
ಮಹಿಳೆಯರ ಶಾರೀರಿಕ ರಚನೆಯ ಕಾರಣದಿಂದಾಗಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಸೋಂಕು ಉಂಟುಮಾಡುತ್ತವೆ. ಜೀವಿತಾವಧಿಯಲ್ಲಿ ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬರು ಕನಿಷ್ಠ ಒಮ್ಮೆಯಾದರೂ ಈ ಸೋಂಕಿಗೆ ಒಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ.
ಖಿನ್ನತೆ ಮತ್ತು ಆತಂಕ
ಮಾನಸಿಕ ಆರೋಗ್ಯದ ವಿಷಯಕ್ಕೆ ಬಂದರೆ, ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಖಿನ್ನತೆ ಮತ್ತು ಆತಂಕದ ಸಮಸ್ಯೆ ಎದುರಿಸುತ್ತಾರೆ. ಹಾರ್ಮೋನುಗಳ ಏರುಪೇರು ಮತ್ತು ಸಾಮಾಜಿಕ ಒತ್ತಡಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ.