ಉಗ್ರಂ ಸಿನಿಮಾ ಖ್ಯಾತಿಯ ನಟ ಹಾಗೂ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಉಗ್ರಂ ಮಂಜು ( Ugramm Manju ) ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.
ಸಂಧ್ಯಾ ಕೈ ಹಿಡಿಯಲಿದ್ದಾರೆ ಮ್ಯಾಕ್ಸ್ ಮಂಜು
ಸಂಧ್ಯಾ ಎನ್ನುವವರ ಜೊತೆ ಇಂದು ನಿಶ್ಚಿತಾರ್ಥ ನಡೆದಿದೆ. ಪಿಣ್ಯದಲ್ಲಿ ಈ ಸಮಾರಂಭ ನಡೆದಿದ್ದು, ಹೂ ಮುಡಿಸುವ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥವು ಕೂಡ ಇಂದೇ ನೆರವೇರಿದೆ. ವಧು ಸಂಧ್ಯಾ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಅಡ್ಮಿನ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಜನವರಿಯಲ್ಲಿ ಮದುವೆ
ಕುಟುಂಬದ ಮೂಲಗಳ ಪ್ರಕಾರ ಜನವರಿಯಲ್ಲಿ ಮದುವೆ ಕಾರ್ಯ ನಡೆಯಲಿದೆ. ಸದ್ಯಕ್ಕೆ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಂದು ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಉಗ್ರಂನಿಂದ ಖ್ಯಾತಿ
ಅಂದಹಾಗೆ, ಉಗ್ರಂ ಮಂಜು ಅವರ ನಿಜವಾದ ಹೆಸರು ಮಂಜುನಾಥ್ ಗೌಡ. ಸ್ಯಾಂಡಲ್ವುಡ್ನಲ್ಲಿ ಖ್ಯಾತ ಖಳನಟ ಮತ್ತು ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ. 2014ರಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾದಲ್ಲಿ ನೆಗೆಟಿವ್ ರೋಲ್‌ಗಳಲ್ಲಿ ಕಾಣಿಸಿಕೊಂಡು, ತಮ್ಮ ನಟನೆಯಿಂದಲೇ ಮನೆ ಮಾತಾದರು.
ಮ್ಯಾಕ್ಸ್ ಸಿನಿಮಾದಲ್ಲಿ ನಟನೆ
ಅಂದಿನಿಂದ ಅವರ ಹೆಸರಿನ ಜತೆಗೆ ಉಗ್ರಂ ಕೂಡ ಸೇರಿಕೊಂಡಿದೆ. ಉಗ್ರಂ ಹೊರತುಪಡಿಸಿ, ಹೀರೋ, ರಾನಿ, ಗಣಪ, ವಜ್ರಕಾಯ ಹಾಗೂ ರಿಕ್ಕಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ, ಕಿಚ್ಚ ಸುದೀಪ್‌ರೊಂದಿಗೆ 'ಮ್ಯಾಕ್ಸ್' ಸಿನಿಮಾದಲ್ಲಿ ನಟಿಸಿ 'ಮ್ಯಾಕ್ಸ್ ಮಂಜು' ಎಂದೂ ಗುರುತಿಸಿಕೊಂಡರು.
ಬಿಗ್ಬಾಸ್ ಮಾಜಿ ಸ್ಪರ್ಧಿ
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಪ್ರವೇಶಿಸಿ ಮಂಜು ಅವರು ತಮ್ಮ ಉಗ್ರ ಸ್ವಭಾವವನ್ನು ತೋರಿಸಿ ಗಮನ ಸೆಳೆದರು. ಆದರೆ, ಶೋ ಮುಗಿದ ನಂತರ ಅವರ ಜೀವನಶೈಲಿಯಲ್ಲಿ ಗಣನೀಯ ಬದಲಾವಣೆಗಳು ಕಂಡುಬಂದವು. ಉಗ್ರತೆಯನ್ನು ಕಡಿಮೆಗೊಳಿಸಿ ಸೈಲೆಂಟ್ ಆಗಿ ಬದಲಾದರು ಮತ್ತು ಧೂಮಪಾನದಂತಹ ಕೆಟ್ಟ ಅಭ್ಯಾಸಗಳನ್ನು ಬಿಟ್ಟರು.