
ಹಬ್ಬಗಳಲ್ಲಿ ಸಿಹಿ ತಿನಿಸುವುದು ಖಾಯಂ. ಆದರೆ ಅತಿಯಾಗಿ ತಿನ್ನುವುದು, ಎಣ್ಣೆ ಪದಾರ್ಥಗಳು, ಉಪವಾಸ ಮಾಡಿ ತಡರಾತ್ರಿ ತಿನ್ನುವುದು ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ. ಹಬ್ಬದ ಖುಷಿಯನ್ನು ನಿಮ್ಮ ಹೊಟ್ಟೆಯು ಹಾಳು ಮಾಡದಂತೆ ಕಾಪಾಡಿಕೊಳ್ಳಲು ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಮದ್ದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಯಾವ ಪದಾರ್ಥಗಳು ಹೊಟ್ಟೆಯುಬ್ಬರ, ಉರಿಯೂತ, ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಕಾಪಾಡುತ್ತದೆ. ಯಾವಾಗ ಈ ನೈಸರ್ಗಿಕ ಮನೆ ಮದ್ದನ್ನು ಸೇವನೆ ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಮಜ್ಜಿಗೆಯಲ್ಲಿ ಪ್ರೊಬಯಾಟಿಕ್ ಅಂಶವಿದೆ. ಲ್ಯಾಕ್ಟಿಕ್ ಆಮ್ಲವಿರುವ ಒಂದು ಗ್ಲಾಸ್ ಮಜ್ಜಿಗೆಗೆ ಚಿಟಿಕೆ ಹುರಿದ ಜೀರಿಗೆ ಪುಡಿ ಬೆರೆಸಿ ಕುಡಿದರೆ ಹೊಟ್ಟೆಯ ಅಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ.
ಶುಂಠಿಯಲ್ಲಿರುವ ಜಿಂಜರಾಲ್ ಅಂಶವು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ ಮತ್ತು ಹೊಟ್ಟೆಯ ಒಳಪದರವನ್ನು ಶಮನಗೊಳಿಸುತ್ತದೆ. ಹಬ್ಬದೂಟದ ಬಳಿಕ ಸ್ವಲ್ಪ ತಾಜಾ ಶುಂಠಿಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ಒಳ್ಳೆಯದು.
ಊಟದ ಬಳಿಕ ಸೋಂಪು ಜಗಿಯುವುದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಆನೆಥೋಲ್ ಅಂಶವು ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸಿ, ಉಬ್ಬಸ ಮತ್ತು ಅಸಿಡಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಳನೀರು ಜೀರ್ಣಾಂಗ ವ್ಯವಸ್ಥೆಯನ್ನು ತಂಪಾಗಿಸುತ್ತದೆ. ಇದರಲ್ಲಿರುವ ಎಲೆಕ್ಟ್ರೋಲೈಟ್‌ಗಳು ದೇಹದ pH ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ, ಅಸಿಡಿಟಿಯನ್ನು ನಿವಾರಿಸುತ್ತದೆ.
ಬಾಳೆ ಹಣ್ಣಿನಲ್ಲಿರುವ ಅಧಿಕ ಪೊಟ್ಯಾಸಿಯಮ್ ಹೊಟ್ಟೆಯ ಆಮ್ಲದ ವಿರುದ್ಧ ನೈಸರ್ಗಿಕವಾಗಿ ಕೆಲಸ ಮಾಡಿ, ಹೊಟ್ಟೆಯನ್ನು ರಕ್ಷಿಸುತ್ತದೆ. ಹೊಟ್ಟೆಯ ಒಳಪದರದ ಮೇಲೆ ರಕ್ಷಣಾತ್ಮಕ ಲೇಪನವನ್ನು ಸೃಷ್ಟಿಸಿ ಉರಿಯನ್ನು ತಡೆಯಲು ಬಾಳೆಹಣ್ಣು ಸಹಾಯ ಮಾಡುತ್ತದೆ.
ಎಣ್ಣೆಯಲ್ಲಿ ಕರಿದ ಆಹಾರ ಸೇವನೆ ಮಾಡಿದಾಗ ಹೊಟ್ಟೆ ಉಬ್ಬರ ಎನಿಸಿದಾಗ ಚಿಟಿಕೆಯಷ್ಟು ಅಜ್ವಾನ ಸೇವನೆ ಮಾಡಿ,. ಅರ್ಧ ಚಮಚ ಓಂ ಕಾಳು ನೀರಿನೊಂದಿಗೆ ಜಗಿದು ತಿನ್ನಬಹುದು. ಇದರಲ್ಲಿರುವ ಥೈಮೋಲ್ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಸಕ್ಕರೆ ಸೇರಿಸದ ಒಂದು ಚಿಕ್ಕ ಗ್ಲಾಸ್ ತಣ್ಣನೆಯ ಹಾಲು ನೈಸರ್ಗಿಕ ಆಂಟಾಸಿಡ್ ಆಗಿ ಕೆಲಸ ಮಾಡುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಹೊಟ್ಟೆಯ ಅಧಿಕ ಆಮ್ಲವನ್ನು ತಟಸ್ಥಗೊಳಿಸಿ ತಕ್ಷಣದ ಉಪಶಮನ ನೀಡುತ್ತದೆ, (ಏಜೆನ್ಸೀಸ್).