ಸಂಘಟನೆಯಿಂದ ಶಕ್ತಿ ಪ್ರಾಪ್ತಿ

mng-feb16-TOWN HALL 1
ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂತ ಸೇವಾಲಾಲ ಜಯಂತಿಯನ್ನು ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು.
Published on

ಮಂಗಳೂರು: ಸಾಮಾಜಿಕ ಸಂಘಟನೆಯಿಂದ ಸಮಾಜಿಕ ಶಕ್ತಿ ಪ್ರಾಪ್ತವಾಗುತ್ತದೆ. ಬಂಜಾರ(ಲಂಬಾಣಿ) ಸಮಾಜದ ಸಂಘಟನೆಗೆ ಸೇವಾ ಲಾಲ್ ಅವರು ಪ್ರೇರಣೆಯಾಗಬೇಕು. ಬಂಜಾರ ಸಮುದಾಯವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಸಂತ ಸೇವಾಲಾಲ್ ಅವರ ಪರಿಶ್ರಮ ಅಪಾರವಾದದ್ದು, ಅವರ ಅಮೂಲ್ಯ ಸಂದೇಶ ಮತ್ತು ಹಿತವಾಣಿಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯಗಳು ನಡೆಯಬೇಕು ಎಂದು ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ.

ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂತ ಸೇವಾಲಾಲ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಜಾರ ಸಮಾಜದ ಸಂಘಟನೆಗೆ ಸಂತ ಸೇವಾಲಾಲ್ ಅವರು ಮಹತ್ತರ ಕೊಡುಗೆ ನೀಡಿದ್ದಾರೆ. ಜಿಲ್ಲಾಡಳಿತ, ಸರಕಾರಗಳ ಗಮನ ಸೆಳೆದು ಬಂಜಾರ ಸಮಾಜದವರಿಗೂ ಸವಲತ್ತುಗಲನ್ನು ದೊರಕಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಯಾವುದೇ ಸಮಾಜಗಳು ಬಲಿಷ್ಠವಾಗಲು ಇಂತಹ ನಾಯಕತ್ವ, ಗುರುಪೀಠದ ಮುಖ್ಯಸ್ಥರು ಕೂಡ ಕಾರಣರಾಗುತ್ತಾರೆ ಎಂದರು.

ಕರಾವಳಿ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘದ ಮಂಗಳೂರು ಅಧ್ಯಕ್ಷ ರಾಜಪ್ಪ ಅವರು ಮಾತನಾಡಿ, 15 ವರ್ಷಗಳಿಂದ ಸಂಘ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಸ್ವಂತ ಜಾಗ, ಕಟ್ಟಡದ ಅವಶ್ಯಕತೆ ಇದೆ. ಈ ಬಗ್ಗೆ ಸಮಾಜ ಗಮನ ಹರಿಸಬೇಕು. ಯುವಜನತೆ ಇಂದು ನಗರದ ಕಡೆಗೆ ವಲಸೆ ಹೋಗಿದ್ದಾರೆ. ಅವರು ತಾಂಡಾದ ರೀತಿ ನೀತಿಗಳಿಂದ ದೂರ ಉಳಿದುಕೊಂಡಿದ್ದಾರೆ. ಅವರು ತಮ್ಮ ತಾಂಡಾದ ಕಡೆಗೆ ಬಂದು ಹೋಗಬೇಕು. ತಾಂಡಾದ ಮಣ್ಣಿನ ರುಚಿಯನ್ನು ಮರೆಯಬಾರದು ಎಂದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸಹಿತ ಹಲವರು ಇದ್ದರು.

ಜಯಪ್ಪ ಲಮಾಣಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಸೇವಾಲಾಲ್‌ರವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.

-----------------

ಬಂಜಾರ ಸಮುದಾಯದ ವೇಷ, ಭೂಷಣ ಹಾಗೂ ಆಚರಣೆಗಳು ಬಹಳ ವಿಭಿನ್ನವಾಗಿವೆ. ಆದರೆ ಕೆಲವು ಕಡೆಗಳಲ್ಲಿ ಈ ಜನಾಂಗದ ವೇಷಭೂಷಣ ಹಾಗೂ ಆಚರಣೆಗಳು ಕಡಿಮೆಯಾಗುತ್ತಿದ್ದು, ಇಂತಹ ವಿಶೇಷ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಬಂಜಾರ ಸಮಾಜದವರು ಶಿಕ್ಷಣ, ಆರೋಗ್ಯ, ವ್ಯಾಪಾರಕ್ಕೆ ಗಮನ ನೀಡಬೇಕು. ಇನ್ನಷ್ಟು ಬಲಿಷ್ಠರಾಗಬೇಕು.

ರಾಜಪ್ಪ ಮಂಗಳೂರು, ಅಧ್ಯಕ್ಷರು,

ಕರಾವಳಿ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net