ಸುಳ್ಯ: ಗಡಿ ಪ್ರದೇಶಗಳಲ್ಲಿ ಅರೆಭಾಷೆ ಬೆಳವಣಿಗೆ ಹಾಗೂ ಅರೆಭಾಷೆ ಮಾತನಾಡುವವರ ಬಾಂಧವ್ಯ ವೃದ್ಧಿಗಾಗಿ ಅರೆಭಾಷೆ ಮಾತನಾಡುವವರ ಗಡಿ ಭಾಗದಲ್ಲಿ ಆರು ಕಡೆ ಅರೆಭಾಷೆ ಗಡಿನಾಡ ಉತ್ಸವಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಮೊದಲ ಕಾರ್ಯಕ್ರಮವನ್ನು ಕೇರಳದ ಬಂದಡ್ಕದ ಶ್ರೀ ಸುಬ್ರಹ್ಮಣ್ಯ ದೇವಳದ ಮಯೂರ ಸಭಾಭನದಲ್ಲಿ ಅ.27ರಂದು ಗ್ರಾಮ ಗೌಡ ಸಂಘ ಬಂದಡ್ಕ ಇದರ ಸಹಯೋಗದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದ್ದಾರೆ.
ಇದಕ್ಕಾಗಿ ಬಂದಡ್ಕದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಾವಜಿ, ಇದಕ್ಕಾಗಿ ಸ್ಥಳೀಯ ಸಮಿತಿಯನ್ನು ಕೂಡಾ ರಚಿಸಲಾಗಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಅಕಾಡೆಮಿ ಸದಸ್ಯರಾದ ಚಂದ್ರಶೇಖರ್ ಪೇರಾಲು ಹಾಗು ಲತಾ ಕುದ್ಪಾಜೆ ಅವರಿಗೆ ವಹಿಸಲಾಗಿದೆ ಎಂದವರು ವಿವರ ನೀಡಿದರು.
ಸಭೆಯಲ್ಲಿ ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ನಿರ್ದೇಶಕ ದೊಡ್ಡಣ್ಣ ಬರೆಮೇಲು, ಮಹಿಳಾ ಘಟಕ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಶೇಖರ್ ಪೇರಾಲು, ಡಾ.ಎನ್.ಎ.ಜ್ಞಾನೇಶ್, ಲತಾ ಕುಪ್ಪಾಜೆ, ಗ್ರಾಮಗೌಡ ಸಮಿತಿ ಅದ್ಯಕ್ಷ ವಿಶ್ವ ಕುಮಾರ್ ಕಟ್ಟಕೋಡಿ, ಪುರುಷೋತ್ತಮ ಬೊಡ್ಡನಕೊಚ್ಚಿ ಇದ್ದರು.