ವಿಜಯವಾಣಿ ಸುದ್ದಿಜಾಲ ಗದಗ
ಶರಣರ ವಚನಗಳು ಮಾನವೀಯ ಮೌಲ್ಯಗಳಿಂದ ಕೂಡಿವೆ. ಪ್ರಸ್ತುತ ದಿನಮಾನಕ್ಕೆ ದಾರೀದಿಪವಾಗಿದೆ. ಬಸವಾದಿ ಶಿವಶರಣರ ಬದುಕು ಮತ್ತು ವಚನಗಳು ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣನ್ನುಂಟು ಮಾಡುತ್ತವೆ. ಶಾಂತಿ, ಸೌಹಾರ್ದಯುತ ಬದುಕಿಗೆ ಶರಣರ ಆದರ್ಶಗಳು, ವಚನಗಳು ಬಹಳಷ್ಟು ಅವಶ್ಯ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿವಾನುಭ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ವಚನದ ಸಾಲಿನಲ್ಲಿ, ಶಬ್ದದಲ್ಲಿಯೂ ಮೌಲ್ಯಯುತ ಸಂದೇಶವನ್ನು ಕಾಣಬಹುದು. ನಮ್ಮ ನುಡಿಗಳು ಪಾರದರ್ಶಕ ಆಗಿರಬೇಕು. ಮಾತು ಮತ್ತು ಕೃತಿಗಳು ಒಂದಾಗಿರಬೇಕು. ಹೇಳುವುದೊಂದು ಬರೆಯುವದೊಂದು ಆಗಬಾರದು. ಶರಣರು ಹೇಳಿದಂತೆ ನಡೆದರು. ಬದುಕಿಗೆ ಮೌಲ್ಯಗಳನ್ನು ಬಿತ್ತಿದರು. ಜಾತಿ, ಮತ, ಪಂಥ, ಸ್ತ್ರೀ, ಪುರುಷ ತಾರತಮ್ಯ ಬಿಟ್ಟು ಸಮಾನತೆಯಿಂದ ಎಲ್ಲರೂ ಬದುಕಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯ ಎಂ. ಕೆ. ಲಮಾಣಿ ಮಾತನಾಡಿ, ವಚನಗಳಲ್ಲಿ ಅತ್ಯಮೂಲ್ಯವಾದ ಜೀವನದ ಆದರ್ಶಗಳನ್ನು ಕಾಣುತ್ತೇವೆ. ಮೋಸ ವಂಚನೆಗಳಿಂದ ದೂರಾದ ಬದುಕೆ ನಿಜವಾದ ಮೌಲ್ಯ. ಶರಣರ ಬದುಕಿನಲ್ಲಿ, ವಚನಗಳಲ್ಲಿ ಆದರ್ಶದ ಹೂವುಗಳೆ ಅರಳಿವೆ. ಸಿಹಿಯಾದ ಹಣ್ಣುಗಳೇ ಬಿಟ್ಟಿವೆ. ವಚನಗಳನ್ನು ಓದಿದಾಗ, ಹೂವುಗಳ ಸುವಾಸನೆ. ಹಣ್ಣುಗಳ ಸಿಹಿ, ಸಹಜವಾಗಿ ಲಭಿಸುತ್ತವೆ. ಅವರ ವಚನಗಳ ಸಾರವೆ ಜಗಕೆ ದಾರಿದೀಪ ಎಂದರು.
ಪಿ.ಪಿ.ಜಿ. ಕಾಲೇಜಿನ ನಿವತ್ತ ಪ್ರಾಚಾರ್ಯ ಡಾ. ಸುಮಿತ್ರಾ ಕಾಡದೇವರಮಠ ಸಂಗೀತ ಸೇವೆಯನ್ನು ನೀಡಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನೆಡೆಸಿಕೊಟ್ಟರು.
ಬಾಲಚಂದ್ರ ಭರಮಗೌಡ್ರ, ವೀರಣ್ಣ ಗೋಟಡಕಿ, ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ್ ಗಾಣಿಗೇರ, ಬಸವರಾಜ ಕಾಡಪ್ಪನವರ ಇತರರು ಇದ್ದರು.