ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮ 19ರಂದು

1001141928
Published on
ಗದಗ: ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗಪಾಠಶಾಲೆಗೆ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ನಗರದ ತೋಂಟದಾರ್ಯ ಸಂಸ್ಥಾನ ಮಠದ ಆವರಣದಲ್ಲಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಶಿವಾನುಭವ ಮಂಟಪದಲ್ಲಿ ಮೇ 19ರಂದು ಬೆಳಿಗ್ಗೆ 10.30ಕ್ಕೆ ಸುವರ್ಣ ಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತೋಂಟದಾರ್ಯ ಮಠದ ಆಡಳಿತಾಧಿಕಾರಿ ಹಾಗೂ ಯೋಗ ಪಾಠಶಾಲೆ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಂಡರಗಿ-ಬೈಲೂರು ತೋಂಟದಾರ್ಯ ಶಾಖಾಮಡಟದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಶಿರೋಳ ಶಾಖಾಮಠದ ಶಾಂತಲಿಂಗ ಸ್ವಾಮೀಜಿ, ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಹಾಗೂ ಕೋಲ ಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖ ವಹಿಸುವರು ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಘನ ಉಪಸ್ಥಿತಿಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಯೋಗ ದೀಪ್ತಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಿಜಯನಗರ ಸಾಮ್ರಾಜ್ಯದ ಅರವೀಡು ರಾಜವಂಶಸ್ಥ ರಾಜಾ ಶ್ರೀ ಕೃಷ್ಣದೇವರಾಯರು 'ದಿ. ಯೋಗಾ ಎಂಗಲ್- ಫ್ರೊ. ಲಕ್ಷ್ಮಣಕುಮಾರ ವಿ.ಎಸ್.' ಗ್ರಂಥ ಲೋಕಾರ್ಪಣೆಗೊಳಿಸುವರು. ಧ್ಯಾನ ಮತ್ತು ಯೋಗದ ಔಷಧೀಯ ಲಾಭಗಳು ವಿಷಯದ ಕುರಿತು ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ನರರೋಗ ತಜ್ಞ ಡಾ. ಸಂತೋಷ ಎನ್.ಎಸ್. ಹಾಗೂ ಆರೋಗ್ಯ ಯೋಗದ ಕುರಿತು ಮನಗುಂಡಿಯ ಬಸವಾನಂದ ಸ್ವಾಮೀಜಿ ಅವರು ಉಪನ್ಯಾಸ ನೀಡುವರು ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಶಾಸಕರಾದ ಜಿ.ಎಸ್. ಪಾಟೀಲ, ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ರಕ್ಷಣಾ ಮಂತ್ರಿ ಆಪ್ತ ಕಾರ್ಯದರ್ಶಿ ಅಮಿತ್ ಕಿಶೋರ ಸೇರಿ ಹಲವರು ಪಾಲ್ಗೊಳ್ಳುವರು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಚ್. ಬೇಲೂರ, ಕೆ.ಎಸ್. ಪಲ್ಲೇದ್, ರುದ್ರಣ್ಣ ಗುಳಗುಳಿ, ವಿವೇಕಾನಂದಗೌಡ ಪಾಟೀಲ, ಶಿವಲೀಲಾ ಅಕ್ಕಿ ಸೇರಿ ಅನೇಕರು ಇದ್ದರು.
ಬಾಕ್ಸ್
6 ಯೋಗ ಸಾಧಕರಿಗೆ ಯೋಗವಸೇವಾ ಸಿರಿ ಪ್ರಶಸ್ತಿ ಪ್ರದಾನ
ಯೋಗ ಶಿಕ್ಷಣ, ಸಾಹಿತ್ಯ, ಕ್ರೀಡೆ, ಪ್ರದರ್ಶನ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಚಂದ್ರಮೌಳಿ ನಾಯ್ಕರ್, ಸಂಗಮೇಶ ಮೇಲ್ಮುರಿ, ಬಸವರಾಜ ಎಂ. ಹಡಗಲಿ, ಚನ್ನಪ್ಪಜ್ಜ ಸಂ. ಕಾಳಗಿ, ಭವರಲಾಲ್ ಆರ್ಯ ಹಾಗೂ ವಿನಾಯಕ ಕೊಂಗಿ ಅವರಿಗೆ ಯೋಗವಸೇವಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಜೊತೆಗೆ ಕಾರ್ಯಕ್ರಮದಲ್ಲಿ 50 ಯೋಗಪಟುಗಳಿಂದ ಯೋಗ ಪ್ರದರ್ಶನ ಜರುಗಲಿದೆ ಎಂದು ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಕೆ.ಎಸ್. ಪಲ್ಲೇದ ಅವರು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net