ಸುಗಮ ಸಂಗೀತ ಕಲಾ ತರಬೇತಿಗೆ ಚಾಲನೆ

01GDG01
Published on
ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ 2025-26 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸುಗಮ ಸಂಗೀತ ಕಲಾ ತರಬೇತಿ ಕಾರ್ಯಕ್ರಮಕ್ಕೆ ಗದಗನ ರಾಜೀವ ಗಾಂಧಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಚಾಲನೆ ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ನಂದಾ ಹಣಬರಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು .
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವದಲ್ಲಿ ಸಂಗೀತ ಕ್ಷೇತ್ರಕ್ಕೆ ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಸಂಗೀತ ವಿದ್ವಾಂಸರು ಗದಗಿನವರು. ಅವರು ಸಂಗೀತ ಕ್ಷೇತ್ರದ ಸಾಧನೆಗಾಗಿ ಭಾರತ ರತ್ನ ಪುರಸ್ಕೃತ ಪಂಡಿತ ಭೀಮಸೇನ ಜೋಶಿ ಸಾಧನೆಗೆ ಪಾತ್ರರಾಗಿದ್ದಾರೆ. ಜೊತೆಗೆ ರಾಜ್ಯದಲ್ಲಿ ಗದಗ ಎಂದ ತಕ್ಷಣ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಸಂಗೀತ ಪಾಠಶಾಲೆ ಎಲ್ಲರಿಗೂ ನೆನಪಾಗುತ್ತದೆ. ಅಂತಹ ಸಂಗೀತದ ಪರಂಪರೆ ಹೊಂದಿರುವ ಗದಗ ಜಿಲ್ಲೆ ಸಂಗೀತದಲ್ಲಿ ಸಮೃದ್ಧವಾಗಿದೆ ಎಂದರು.
ಸರ್ಕಾರ ಮಕ್ಕಳಿಗೆ ಶಿಕ್ಷಣಕ್ಕಾಗಿ ಉಚಿತ ಶಿಕ್ಷಣ ವಸತಿ ಜೊತೆಗೆ ಸುಗಮ ಸಂಗೀತ ತರಬೇತಿಯನ್ನು ನೀಡುತ್ತಿರುವುದು ಸಂತಸದ ವಿಷಯ. ಇದನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ತಮ್ಮಲ್ಲಿ ಅಡಗಿರುವ ಸಂಗೀತ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ಪ್ರಾಸ್ತಾವಿಕವಾಗಿ ಮಾತನಾಡಿ ವಸತಿ ಶಾಲೆಯ ಮಕ್ಕಳಿಗೆ ಸುಗಮ ಸಂಗೀತ ತರಬೇತಿಯನ್ನು ನುರಿತ ಕಲಾವಿದರಿಂದ ಮುಂದಿನ ಆರು ತಿಂಗಳವರೆಗೆ ನೀಡಲಾಗುವುದು. ವಾದ್ಯ ಪರಿಕರಗಳ ಜೊತೆಗೆ ತರಬೇತಿಯನ್ನು ನೀಡಲಾಗುತ್ತಿದ್ದು ಮಕ್ಕಳು ತಮಗಿರುವ ಸಂಗೀತದ ಅಭಿರುಚಿಯನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಸಂಗೀತ ಕಲಾವಿದರಾಗಲು ಇದೊಂದು ಸುವರ್ಣಾವಕಾಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಎನ್, ಮಾತನಾಡಿ ವಸತಿ ಶಾಲೆಯ ಮಕ್ಕಳಿಗೆ ಈಗಾಗಲೇ ಸರ್ಕಾರ ಹತ್ತು ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಇದರೊಂದಿಗೆ ಸಂಗೀತ ಅಭ್ಯಾಸಿಸಲು ಸಹ ಅನುವು ಮಾಡಿಕೊಟ್ಟಿರುವುದು ಸಹ ಸಂತಸ ತಂದಿದ್ದು ಮಕ್ಕಳು ಸಂಗೀತ ಅಭ್ಯಸಿಸುವ ಮೂಲಕ ಸಂಗೀತ ಜ್ಞಾನ ತಮ್ಮದಾಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಪಾಲಕರಾದ ಶ್ರಿಮತಿ ವಿದ್ಯಾ ಬೆಳವಣಕಿ, ಪಾಪನಾಶಿ ತಾಂಡಾದ ಸುಗಮ ಸಂಗೀತ ಕಲಾವಿದರಾದ ಶ್ರೀಮತಿ ಸಾವಿತ್ರಿ ಎಂ.ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಕುಮಾರ ಸೋಪಡ್ಲಾ , ನವೀನ ಪತ್ತಾರ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net