ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಸಿ: ತಾರಾಮಣಿ

23GDG08
Published on

ಗದಗ: ಜಿಲ್ಲೆಯಲ್ಲಿ ಜೂನ್​ ತಿಂಗಳಲ್ಲಿ ಸಾಕಷ್ಟು ಮಳೆಯಾಗಿರುವ ಕಾರಣದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಗೋವಿನಜೋಳ, ಸೂರ್ಯಕಾಂತಿ, ತೊಗರಿ, ಶೇಂಗಾ, ಹತ್ತಿ ಹಾಗೂ ಇತರೆ ಬೆಳೆಗಳಿಗೆ ರೈತರು ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಬಳಸುತ್ತಿದ್ದಾರೆ. ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಒಂದು ಎಕರೆ ಬೆಳೆಗೆ ಸುಮಾರು 500 ಮೀಲೀ ನ್ಯಾನೋ ಯೂರಿಯಾ ಬಳಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ. ಎಚ್​. ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ತಿಳಿಸಿರುವ ಅವರು, ಬೆಳೆಗಳಿಗೆ ಹರಳು ರೂಪದ ಯೂರಿಯಾ ಬಳಸುವುದರಿಂದ ಶೇ. 50 ರಷ್ಟು ಬೇಕಾದ ಪೋಷಕಾಂಶಗಳು ಮಾತ್ರ ದೊರೆಯುವ ಸಾಧ್ಯತೆ ಇರುತ್ತದೆ ಹಾಗೂ ಉಳಿದ ಪೋಷಕಾಂಶಗಳು ನೀರಿನ ಹರಿವಿಕೆಯಿಂದ ಪೋಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ ಬಳಸುವುದರಿಂದ ಬೆಳೆಗಳಿಂದ ಶೇ. 80 ರಷ್ಟು ಪೋಷಕಾಂಶಗಳು ದೊರೆಯುತ್ತವೆ. ನ್ಯಾನೋ ಯೂರಿಯಾ ಪ್ರಧಾನ ಪೋಷಕಾಂಶವಾದ ಸಾರಜನಕದ ಮೂಲ ದ್ರವರೂಪ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಲ್ಲಿ ಕಳೆ ನಿರ್ವಹಣೆ ಆಗುವುದರ ಜೊತೆಗೆ ಉತ್ತಮ ಬೆಳವಣಿಗೆಗೆ ಅನುಕೂಲ ಮಾಡುತ್ತದೆ ಎಂದು ತಾರಾಮಣಿ ಪ್ರಕಟಣೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net