

ಜಿ20 ಶೃಂಗಸಭೆ 2023: ಪಾನಿಪುರಿ ಬಂಡಿಯವರಿಂದ ಹಿಡಿದು ಫೈರ್ ಸ್ಟಾರ್ ಹೋಟೆಲ್ವರೆಗೆ ಎಲ್ಲೆಲ್ಲೂ ಯುಪಿಐ ಪಾವತಿಯೇ ಅಭ್ಯಾಸವಾಗಿಬಿಟ್ಟಿದೆ. ಜಿ20 ವೇದಿಕೆಯಲ್ಲಿ ಭಾರತವು ಈ ಮಹಾನ್ ಯಶಸ್ಸನ್ನು ಜಗತ್ತಿಗೆ ಹೇಳಲಿದೆ.
ಅಂದಹಾಗೆ ಭಾರತವು ಮೊದಲ ಬಾರಿಗೆ ಜಿ20 ಶೃಂಗಸಭೆ ಆಯೋಜಿಸುತ್ತಿದ್ದು, ಈ ತಿಂಗಳ 9-10 ರಂದು ನಡೆಯಲಿರುವ ಶೃಂಗಸಭೆಯಲ್ಲಿ, ಯುಎಸ್ ಮತ್ತು ಚೀನಾ ಸೇರಿದಂತೆ ವಿಶ್ವದ 20 ದೊಡ್ಡ ಆರ್ಥಿಕ ಶಕ್ತಿಗಳು ದೆಹಲಿಗೆ ಬಂದಿಳಿಯಲಿವೆ. ಭಾರತವು ಈ ಅವಕಾಶವನ್ನು ಎಲ್ಲಾ ರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಶೃಂಗಸಭೆಗೆ ಬರುವ ಎಲ್ಲರಿಗೂ ನಮ್ಮ ದೇಶದ ಡಿಜಿಟಲ್ ಸಾಮರ್ಥ್ಯಗಳ ಬಗ್ಗೆ ಅರಿವು ಮೂಡಿಸುವುದು ಅವುಗಳಲ್ಲಿ ಒಂದಾಗಿದೆ.
ಆಧಾರ್, ಡಿಜಿಲಾಕರ್, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ಹಣ ವಿತರಣೆಯಂತಹ ಭಾರತದ ಡಿಜಿಟಲ್ ಸಾಧನೆಗಳ ಬಗ್ಗೆ ಜಿ20 ಪ್ರತಿನಿಧಿಗಳಿಗೆ ತಿಳಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಇಟಿ ವರದಿಯ ಪ್ರಕಾರ, ಸಮ್ಮೇಳನದ ಸಮಯದಲ್ಲಿ ಎಲ್ಲಾ ಪ್ರತಿನಿಧಿಗಳಿಗೆ ಯುಪಿಐ ಮೂಲಕ ಹಣವನ್ನು ಕಳುಹಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ.
1,000 ಕ್ಕೂ ಹೆಚ್ಚು ಪ್ರತಿನಿಧಿಗಳು
ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ 1,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆಯಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಅವರೆಲ್ಲರಿಗೂ ವಾಲೆಟ್‌ಗಳನ್ನು ತಯಾರಿಸುತ್ತಿದೆ. ಶೃಂಗಸಭೆಯ ಸಮಯದಲ್ಲಿ, ಯುಪಿಐ ಮೂಲಕ ಪ್ರತಿಯೊಬ್ಬರ ವಾಲೆಟ್‌ಗೆ 1,000 ರೂ.ಗಳನ್ನು ವರ್ಗಾಯಿಸಲಾಗುತ್ತದೆ. ಪ್ರತಿನಿಧಿಗಳು ಈ ಹಣವನ್ನು ಶೃಂಗಸಭೆಯಲ್ಲಿ ಸ್ಥಾಪಿಸಲಾದ ಸ್ಟಾಲ್‌ಗಳಲ್ಲಿ ವಸ್ತುಗಳನ್ನು ಖರೀದಿಸಲು ಬಳಸಬಹುದು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದಲ್ಲಿ ಡಿಜಿಟಲ್ ಪಾವತಿ ಎಷ್ಟು ಸುಲಭವಾಗಿದೆ ಎಂಬುದನ್ನು ಇತರ ದೇಶಗಳ ನಾಯಕರು ಮತ್ತು ಅಧಿಕಾರಿಗಳಿಗೆ ತಿಳಿಸಲಿದ್ದು, ಭಾರತವು ಈಗ ಡಿಜಿಟಲ್ ಪಾವತಿಗಳನ್ನು ಹೇಗೆ ಮಾಡುತ್ತಿದೆ ಮತ್ತು ಡಿಜಿಟಲ್ ಪಾವತಿ ಇಂಟರ್ಫೇಸ್ ಜನರ ಜೀವನವನ್ನು ಸುಧಾರಿಸಲು ಹೇಗೆ ಸಹಾಯ ಮಾಡಿದೆ ಎಂಬುದರ ಕುರಿತು ಜಿ20 ಪ್ರತಿನಿಧಿಗಳಿಗೆ ಅರಿವು ಮೂಡಿಸಲಾಗುತ್ತದೆ.
ಭಾರತದಲ್ಲಿ ಬಳಕೆಗೆ ತರಲಾದ ಇತರ ಡಿಜಿಟಲ್ ಸಾಮರ್ಥ್ಯಗಳನ್ನು ಸಹ ಜಿ20 ಶೃಂಗಸಭೆಯಲ್ಲಿ ಪ್ರದರ್ಶಿಸಲಾಗುತ್ತದೆ. ಯುಪಿಐ ಜೊತೆಗೆ ಆಧಾರ್, ಡಿಜಿಲಾಕರ್ ಸೇವೆಗಳನ್ನೂ ಪ್ರತಿನಿಧಿಗಳಿಗೆ ಪರಿಚಯಿಸಲಾಗುವುದು. ಇದಲ್ಲದೆ, ಭಾಷಿಣಿ, ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಮತ್ತು ಜಿ 20 ಶೃಂಗಸಭೆಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯಾದ ಇ ಸಂಜೀವನಿಯನ್ನು ಪ್ರತಿನಿಧಿಗಳಿಗೆ ಪ್ರಸ್ತುತಪಡಿಸಲು ಯೋಜಿಸಲಾಗಿದೆ. ಭಾಷಿನಿ ಒಂದು ಭಾಷಾ ಅನುವಾದ ಸಾಧನವಾಗಿದೆ. ವಿವಿಧ ದೇಶಗಳಿಂದ ಆಗಮಿಸುವ ಪ್ರತಿನಿಧಿಗಳು ತಮ್ಮ ಸ್ವಂತ ಭಾಷೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ತಕ್ಷಣವೇ ಕೇಳಲು ಇದು ಸಹಾಯ ಮಾಡುತ್ತದೆ.