ಪುನಃಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ

Published on

ಉಳ್ಳಾಲ: ಗ್ರಾಮಚಾವಡಿ ಕೊಣಾಜೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಪಂಚಲೋಹ ವಿಗ್ರಹದ ಪುನಃಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ ಹಾಗೂ ಸಂಘದ 44ನೇ ವಾರ್ಷಿಕೋತ್ಸವ ಸವಾರಂಭ ಡಿ.22ರಿಂದ 25ರವರೆಗೆ ನಡೆಯಲಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ತಿಳಿಸಿದರು.

ಶಿವಗಿರಿ ಮಠದ ನಿಕಟಪೂರ್ವ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ವಿಶೂದಾನಂದ ಸ್ವಾಮೀಜಿ ಹಾಗೂ ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಂಕನಾಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಪ್ರಧಾನ ಅರ್ಚಕ ಗಂಗಾಧರ ಶಾಂತಿ ನೇತೃತ್ವದಲ್ಲಿ ವಿವಿಧ ವೈದಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

22ರಂದು ಬೆಳಗ್ಗೆ ಉಗ್ರಾಣ ಮುಹೂರ್ತ, ಬಳಿಕ ಕೊಪ್ಪರಿಗೆ ಮುಹೂರ್ತ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಕುದ್ರೋಳಿ ಕ್ಷೇತ್ರದಿಂದ ಪಂಚಲೋಹ ವಿಗ್ರಹದ ಶೋಭಾಯಾತ್ರೆ ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ತಲುಪಿ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಉದ್ಘಾಟನೆಗೊಂಡು ಗುರುಮಂದಿರ ತಲುಪಲಿದೆ. ರಾತ್ರಿ 7ರಿಂದ ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಕಣಿಯೂರು ಮಠದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

23ರಂದು ವಿವಿಧ ವೈದಿಕ ವಿಧಿವಿಧಾನಗಳು ನಡೆಯಲಿದ್ದು, 24ರಂದು ಸಂಜೆ 6ಕ್ಕೆ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. 25ರಂದು ಬೆಳಗ್ಗೆ 10.12ಕ್ಕೆ ನಾರಾಯಣಗುರುಗಳ ಪಂಚಲೋಹದ ವಿಗ್ರಹ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ, ಮಧ್ಯಾಹ್ನ 12ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, 2ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರು, ಶೈಕ್ಷಣಿಕ, ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರಿಗೆ ಅಭಿನಂದನೆ ನಡೆಯಲಿದೆ. 26ರಂದು ಸಂಜೆ 6ರಿಂದ 48 ದಿನ ವಿವಿಧ ಭಜನಾ ತಂಡಗಳಿಂದ ಸಂಧ್ಯಾ ಭಜನೆ ನಡೆಯಲಿದೆ ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ್ ಬೋಳಿಯಾರ್, ಗೀತಾ ಡಿ.ಕುಂದರ್, ಯಶವಂತ ದೇರಾಜೆ, ಕೆ.ಟಿ.ಸುವರ್ಣ, ಕೆ.ಪಿ.ಸುರೇಶ್, ಲಕ್ಷ್ಮಣ ಸಾಲ್ಯಾನ್, ದೇವಕಿ ಉಳ್ಳಾಲ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net