ಫ್ರೆಂಡ್​ಷಿಪ್​ ಡೇ: ಸ್ನೇಹದ ಸಂಕೇತವಾಗಿದ್ದ ಚಿರಂಜೀವಿ...

Chiranjeevi Sarja - Pannagabharana
Published on
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ, ಜತೆಗೆ ಕೆಲ ಸೆಲೆಬ್ರಿಟಿಗಳ ಅನುಭವಗಳೂ ಇಲ್ಲಿವೆ...

ಚಿರಂಜೀವಿ ಬಗ್ಗೆ ಹೇಳ ಹೊರಟರೆ, ಅದು ಮುಗಿಯದ ಪುಸ್ತಕ. ಎಷ್ಟು ಹೇಳಿದರೂ ಸಾಕಾಗುವುದಿಲ್ಲ, ಮುಗಿಯುವುದಿಲ್ಲ. ಆಗ ನಾವಿನ್ನೂ ಹೈಸ್ಕೂಲ್ ಅಂತ ಕಾಣತ್ತೆ. ನಾನು, ಪ್ರಜ್ವಲ್ ದೇವರಾಜ್ ಮತ್ತು ಚಿರು ಒಟ್ಟಿಗೆ ಇಮ್ರಾನ್ ಸರ್ದಾರಿಯಾ ಅವರ ಡಾನ್ಸ್ ಕ್ಲಾಸ್​ಗೆ ಸೇರಿದ್ವಿ. ಅಲ್ಲಿಂದ ನಮ್ಮ ಸ್ನೇಹ ಶುರು. ಏನೇ ಮಾಡಿದರೂ ನಮ್ಮದೇ ಆದ ಒಂದು ಪಟಾಲಂ ಇದೆ. ಒಂಬತ್ತು ಮಂದಿ ಹುಡುಗರ ಗುಂಪು. ಒಟ್ಟಿಗೆ ಸಿನಿಮಾ ನೋಡೋದು, ಸಿನಿಮಾ ಕಾರ್ಯಕ್ರಮ ಇದ್ದರೂ ಒಟ್ಟಿಗೆ ಹೋಗೋದು ವಾಡಿಕೆ. ನಮ್ಮ ಗುಂಪಿನ ಯಾರದೇ ಮನೆಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ಎಲ್ಲರ ಹಾಜರಿ ಅಲ್ಲಿ ಕಡ್ಡಾಯ. ಅದರಲ್ಲೂ ಚಿರು ಎಲ್ಲಕ್ಕಿಂತ ಸ್ಪೆಷಲ್. ಆತನ ಮೊದಲ ಸಿನಿಮಾ ಹೋಮ್ ಬ್ಯಾನರ್​ನಲ್ಲಿ ಆಗಿತ್ತು. ಎರಡನೇ ಸಿನಿಮಾ ‘ಗಂಡೆದೆ’ಗೆ ಸಂಭಾವನೆ ಸಿಕ್ಕಿತ್ತು. ಆ ಖುಷಿಯನ್ನು ಹಂಚಿಕೊಳ್ಳಲು ನಮ್ಮ ಇಡೀ ಬಳಗಕ್ಕೆ ಏನಾದರೊಂದು ನೀಡಬೇಕೆಂದು ಹಠ ಹಿಡಿದಿದ್ದ. ಅದರಂತೆ ಎಲ್ಲರಿಗೂ ಚೆಕ್ ನೀಡಿದ್ದ. ಈಗಲೂ ಆ ಚೆಕ್ ನಮ್ಮ ಕೆಲ ಸ್ನೇಹಿತರ ಬಳಿ ಇದೆ. ಸಿನಿಮಾ ಶೂಟಿಂಗ್​ಗೆಂದು ವಿದೇಶಕ್ಕೆ ಹೋದರೆ ಮುಗೀತು, ನಮ್ಮ ಗ್ಯಾಂಗ್​ಗೆ ಏನಾದರೊಂದು ತರುತ್ತಿದ್ದ. ಏನೇ ತಂದರೂ ಎಲ್ಲರಿಗೂ ತರುತ್ತಿದ್ದ. ‘ಅಂಗಡಿಯನ್ನೇ ಹೊತ್ಕೊಂಡ್ ಬರಬೇಡ ಮಾರಾಯಾ ...’ ಎಂದು ನಾವು ಕಾಡಿಸಿದ್ದು ಉಂಟು. ಹಾಗಾಗಿ ಚಿರುಗೆ ಗೆಳೆತನ ಅಂದರೆ ಅಷ್ಟೊಂದು ಪ್ರೀತಿ ಮತ್ತು ಅದನ್ನು ಸದಾ ಕಾಯ್ದುಕೊಳ್ಳಬೇಕೆನ್ನುವ ಗುಣ ಅವನಲ್ಲಿ ಚೂರು ಹೆಚ್ಚೇ ಇತ್ತು. ಇತ್ತೀಚೆಗೆ ಕೋವಿಡ್ ಲಾಕ್​ಡೌನ್ ಶುರುವಾದಾಗ ಸ್ಯಾನಿಟೈಸರ್ ಸಹ ಬರೋಬ್ಬರಿ 20 ಖರೀದಿ ಮಾಡಿ ತಂದಿದ್ದ. ಎಲ್ಲರಿಗೂ ಒಂದೊಂದು ಎಂದು ನೀಡಿದ್ದ. ನಿಜಕ್ಕೂ ಈಗ ಅದೆಲ್ಲವನ್ನು ನೆನಪಿಸಿಕೊಂಡರೆ, ಮಾತು ಹೊರಡುವುದಿಲ್ಲ. ಕರಿಯರ್​ನ ಒಂದೊಳ್ಳೆ ಪೀಕ್​ನಲ್ಲಿದ್ದಾಗಲೇ ನಮ್ಮನ್ನು ಅಗಲಿದ. ನಮ್ಮ ಇಡೀ ಸ್ನೇಹ ಬಳಗದ ಸಂಕೇತವಾಗಿದ್ದ ಚಿರು. ರಿಯಲಿ ಮಿಸ್ ಯೂ ಮ್ಯಾನ್.
| ಪನ್ನಗಾಭರಣ ಚಿರು ಬಾಲ್ಯ ಸ್ನೇಹಿತ, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net