

ಕುಂದಾಪುರ: ಫ್ರಾನ್ಸ್ ದೇಶದ ಇನ್ಸಾ ವಿಶ್ವವಿದ್ಯಾನಿಲಯದ ಏಳು ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಇಂಟರ್ನ್‌ಶಿಪ್‌ಗೆ ಆಯ್ಕೆ ಮಾಡಿಕೊಂಡಿರುವುದು ಕುಂದಾಪುರ ತಾಲೂಕಿನ ಹಳ್ಳಿಗಾಡು ಪ್ರದೇಶವಾದ ಕನ್ಯಾನ ಗ್ರಾಮದ ಕೂಡ್ಲು ಸರ್ಕಾರಿ ಶಾಲೆಯನ್ನು. ಇಲ್ಲಿನ ಗ್ರಾಮೀಣ ಮಕ್ಕಳೊಂದಿಗೆ ಬೆರೆತು ಅವರಿಗೆ ತಮ್ಮ ದೇಶದ ಜೀವನ ಶೈಲಿ, ಇಂಗ್ಲಿಷ್ ಪಾಠಗಳನ್ನು ಹೇಳಿಕೊಟ್ಟು, ತಾವು ಕೂಡ ಕೆಲವೊಂದು ಕನ್ನಡ ಪದಗಳನ್ನು ಕಲಿಯುತ್ತಿದ್ದಾರೆ. ಇಂಡಿಯಾ ಎಕ್ಸನ್-2025 ವರ್ಕ್ ಶಿಬಿರದಡಿ ಎಫ್‌ಎಸ್‌ಎಲ್ ಇಂಡಿಯಾ ಸಹಯೋಗದಲ್ಲಿ ಫ್ರಾನ್ಸ್‌ನ ಇನ್ಸಾ ವಿವಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕ್ಲಾರಾ, ಲೂಸಿ, ಜೆನ್, ವಾಲಿರೋಂ, ಎಲಿಯೊ, ಹೋಗೊ, ಗಬಾಂ ಅವರು ಒಂದೆರಡು ತಿಂಗಳ ಕಾಲ ಇಲ್ಲಿ ಇರಲಿದ್ದಾರೆ. ವಾರದಲ್ಲಿ ಒಂದು ದಿನ ಶಾಲೆಗೆ ಆಗಮಿಸಿ ಮಕ್ಕಳಿಗೆ ಚಿತ್ರಕಲೆ, ಇಂಗ್ಲಿಷ್ ಕಲಿಕೆ, ಸಂವಹನ, ಆಟ, ಪರಿಸರದ ಪಾಠ, ಇಂಗ್ಲಿಷ್ ಪದ್ಯಗಳನ್ನು ಹೇಳುವುದು, ಫ್ರಾನ್ಸ್ ದೇಶದ ಆಹಾರ ಕ್ರಮ, ಜೀವನಶೈಲಿ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಒಟ್ಟು 28 ಮಕ್ಕಳಿದ್ದಾರೆ. ವಾರದಲ್ಲಿ ಒಂದು ದಿನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ವಿಶೇಷವೆಂದರೆ ಫ್ರಾನ್ಸ್‌ನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೂಡ್ಲು ಶಾಲೆ ಮಕ್ಕಳು ಕುಂದಾಪ್ರ ಕನ್ನಡ ಹೇಳಿಕೊಡುತ್ತಿದ್ದು, ಕೆಲವೊಂದು ಕನ್ನಡ ಪದಗಳನ್ನು ಕಲಿತಿದ್ದಾರೆ. ಇವರಿಗೆ ಎಫ್‌ಎಸ್‌ಎಲ್‌ನ ರಕ್ಷಾ ಶೆಣೈ, ನಾಗರಾಜ್, ಶಾಲಾ ಮುಖ್ಯಶಿಕ್ಷಕಿ ಪ್ರೇವಾ, ಶಿಕ್ಷಕಿ ಸವಿತಾ ಸಹಕಾರ ನೀಡುತ್ತಿದ್ದಾರೆ.
ಶಾಲೆಯಲ್ಲಿದ್ದ ಶೌಚಗೃಹ ಬೀಳುವ ಸ್ಥಿತಿಯಲ್ಲಿತ್ತು. ಇದನ್ನು ಅರಿತ ಎಫ್‌ಎಸ್‌ಎಲ್ ಇಂಡಿಯಾದ ಸ್ವಯಂ ಸೇವಕರು ಎಕ್ಸನ್ ಇಂಡಿಯಾ ವರ್ಕ್ ಶಿಬಿರದ ಗಮನಕ್ಕೆ ತಂದರು. ಎಫ್‌ಎಸ್‌ಎಲ್ ಹಾಗೂ ಫ್ರಾನ್ಸ್‌ನ 2 ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ 3 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಶೌಚಗೃಹವನ್ನು ಫ್ರಾನ್ಸ್‌ನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಹಳೆಯ ಶೌಚಗೃಹವನ್ನು ದುರಸ್ತಿ ವಾಡಿ, ಅದಕ್ಕೆ ಸ್ವತಃ ಬಣ್ಣ ಬಳಿಯುವ ಕಾರ್ಯ ಮಾಡಿದ್ದಾರೆ.
ನಾವು 7 ಜನ ಇಂಡಿಯಾ ಎಕ್ಸನ್ ಶಿಬಿರದಡಿ ಇಲ್ಲಿಗೆ ಬಂದಿದ್ದೇವೆ. ಮುಖ್ಯವಾಗಿ ಈ ಶಾಲೆಗೆ ಶೌಚಗೃಹ ನಿರ್ಮಿಸಿಕೊಟ್ಟಿರುವುದು ನಮ್ಮ ವಿನೂತನ ಕಾರ್ಯವಾಗಿದೆ. ದುಸ್ಥಿತಿಯಲ್ಲಿದ್ದ ಶೌಚಗೃಹವನ್ನು ಸರಿಪಡಿಸಿದ್ದೇವೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಪ್ರಯೋಜನವಾಗಲಿದೆ. ಕ್ಲಾರಾ ಹಾಗೂ ಎಲಿಯೊ, ಫ್ರಾನ್ಸ್‌ನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಏಳು ಮಂದಿ ಫ್ರಾನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಶೌಚಗೃಹ ನಿರ್ವಾಣ, ದುರಸ್ತಿ ಕಾರ್ಯ, ಮಕ್ಕಳಿಗೆ ಪಾಠ, ಇಂಗ್ಲಿಷ್ ಕಲಿಸಲು ಪ್ರಯತ್ನಿಸಿದ್ದಾರೆ. ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳನ್ನು ಹೇಳಿಕೊಡುತ್ತಿದ್ದು ಉತ್ತಮ ಸ್ಪಂದನೆ ಸಿಕ್ಕಿದೆ. ರಕ್ಷಾ ಶೆಣೈ, ಎಫ್‌ಎಸ್‌ಎಲ್ ಇಂಡಿಯಾ ಸ್ವಯಂಸೇವಕಿ