ಅನುದಾನಿತ ಶಾಲೆಗಳನ್ನೂ ಸರ್ಕಾರವೇ ನಡೆಸಲಿ...

Heggunje
Published on

ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

ಹೆಗ್ಗುಂಜೆ ಟ್ರಸ್ಟ್​ನಿಂದ ಮಕ್ಕಳಿಗೆ ಸಮವಸ್ತ್ರ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯದಲ್ಲಿ ಪ್ರತಿವರ್ಷವೂ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ ಎನ್ನುವುದು ಬೇಸರದ ಸಂಗತಿ. ಎಲ್ಲೆಡೆಯೂ ಶಿಕ್ಷಣ ಲಭಿಸುವಂತಾಗಲು ಅನುದಾನಿತ ಶಾಲೆ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಅವುಗಳು ಮಲತಾಯಿ ಧೋರಣೆಗೆ ಸಿಲುಕಿರುವ ಬಡ ಮಕ್ಕಳ ಶಾಲೆಯಾಗಿದೆ. ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿದ್ದು, ಅದರೊಟ್ಟಿಗೇ ಇರುವ 2,400 ಅನುದಾನಿತ ಶಾಲೆಗಳನ್ನೂ ಸರ್ಕಾರವೇ ನಡೆಸಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್​ ಟ್ರಸ್ಟ್​ (ರಿ.) ಬೆಂಗಳೂರು ನೇತೃತ್ವದಲ್ಲಿ ಉಡುಪಿ ಜಿಲ್ಲಾ ಅನುದಾನಿತ ಶಾಲಾ ಸಂಘದ ಸಹಕಾರದಲ್ಲಿ ಆಗಸ್ಟ್​ 2ರಂದು ಆಯೋಜಿಸಿದ್ದ ಉಡುಪಿ ಜಿಲ್ಲೆಯ 200 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 20 ಸಾವಿರ ಜತೆ ಶಾಲಾ ಸಮವಸ್ತ್ರ ಉಚಿತ ವಿತರಣೆ ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಅಸಹಕಾರಕ್ಕೆ ಬೇಸರ

ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್​ನ ಪ್ರವರ್ತಕ ಡಾ. ಎಚ್​.ಎಸ್​. ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, 17 ವರ್ಷದ ಹಿಂದೆ 500 ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ಈ ಅಭಿಯಾನ ಇಂದಿಗೂ ಮುಂದುವರಿದಿದೆ. ಇಂತಹ ಉತ್ತಮ ಕಾರ್ಯ ಮಾಡುವಾಗ ಸರ್ಕಾರ ಸಹಕಾರ ನೀಡುತ್ತಿಲ್ಲವಲ್ಲ ಎಂಬ ಬೇಸರವಿದೆ. ಈ ಬಾರಿ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಗುತ್ತಿದೆ. ಕುಗ್ರಾಮಗಳಲ್ಲಿ ಇರುವ ಅನುದಾನಿತ ಶಾಲೆಗಳು ಮಾತ್ರ ಕನ್ನಡ ಕಲಿಸುವ ಕೇಂದ್ರವಾಗಿದೆ. ಅಂತಹ ಶಾಲೆಗಳನ್ನು ಸರ್ಕಾರ ಕೈ ಹಿಡಿದು ಮೇಲೆತ್ತಬೇಕಿದೆ ಎಂದರು.

ಇಂದಿರಾ ಹಾಲಂಬಿಗೆ ಪ್ರಶಸ್ತಿ ಪ್ರದಾನ

Heggunje 2
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್​ ಸ್ವೀಕರಿಸಿದ ಡಾ. ಎಚ್​.ಎಸ್​. ಶೆಟ್ಟಿ ಅವರನ್ನು ಕಲಾರಂಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕಿ ಇಂದಿರಾ ಹಾಲಂಬಿ ಅವರಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಲಾಡಿ ರಾಜೀವ ಶೆಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಶ್ರೀರಾಮ್​ನ ಶೈಕ್ಷಣಿಕ ಸಾಧನೆಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಮವಸ್ತ್ರ ವಿತರಿಸಲಾಯಿತು.

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ ಎಸ್​. ಆಲೂರು ಶುಭಾಶಂಸನೆಗೈದರು.

ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಮುರಳಿ ಕಡೆಕಾರು, ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಡಾ.ಜಯಶೀಲ ಶೆಟ್ಟಿ, ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಕೆ.ಅರುಣಕುಮಾರ್​ ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್​ ಟ್ರಸ್ಟ್​ನ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

ಜನಪ್ರತಿನಿಧಿಗಳಾದ ನಾವುಗಳು ಸರ್ಕಾರದ ಅನುದಾನ ಕಾರ್ಯಕ್ರಮ, ಯೋಜನೆಗಳನ್ನು ಉದ್ಘಾಟನೆ ಮಾಡುತ್ತೇವೆ. ಆದರೆ, ಯಾವುದೇ ಫಲಾಪೇಕ್ಷೆ ಇಲ್ಲದೆ ಮಕ್ಕಳಿಗೆ ಉಚಿತವಾಗಿ, ಗುಣಮಟ್ಟದ ಸಮವಸ್ತ್ರ ನೀಡುವ ಡಾ. ಎಚ್​.ಎಸ್​. ಶೆಟ್ಟಿ ಅವರು ರಾಜ್ಯಕ್ಕೆ ಮಾದರಿ. | ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net