ವಿದ್ಯಾರ್ಥಿಗಳ ಮನೆಯಂಗಳಕ್ಕೆ ಬಸ್: ರಾಮಕೃಷ್ಣ ವಿದ್ಯಾಸಂಸ್ಥೆ ಮಕ್ಕಳಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಿಕೊಟ್ಟ ನಿಟ್ಟೆ ವಿವಿ ಆಡಳಿತ

New Project (54)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಶಿಕ್ಷಣ ಪ್ರೇಮಿಗಳು ವಿವಿಧ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಹರೇಕಳ ಅನುದಾನಿತ ಶ್ರೀ ರಾಮಕೃಷ್ಣ ಶಾಲೆಗೆ ನಿಟ್ಟೆ ವಿಶ್ವವಿದ್ಯಾಲಯದಿಂದ ಬಸ್‌ನ ಕೊಡುಗೆ ಲಭಿಸಿದೆ!

ಒಂದು ಕಾಲದಲ್ಲಿ ಹರೇಕಳ, ಪಾವೂರು, ಪಜೀರ್, ಕೊಣಾಜೆ ಗ್ರಾಮಗಳಲ್ಲಿ ಪ್ರತಿಷ್ಠಿತ ಎನಿಸಿದ್ದ ಅನುದಾನಿತ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಒಂದೆಡೆ ಆಂಗ್ಲ ಮಾಧ್ಯಮದ ಅಬ್ಬರ, ಮತ್ತೊಂದೆಡೆ ಅಲ್ಲಲ್ಲಿ ಸರ್ಕಾರಿ ಶಾಲೆಗಳ ಆರಂಭದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸತೊಡಗಿತ್ತು. ಆದರೂ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಪ್ರಯತ್ನದ ಫಲವಾಗಿ ಘನತೆ ಉಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಈ ವರ್ಷದಿಂದ ಎಲ್‌ಕೆಜಿಯನ್ನೂ ಆರಂಭಿಸಿದೆ.

ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಬಸ್ ವ್ಯವಸ್ಥೆಗೆ ಮುಂದಾಗಿ ನಿಟ್ಟೆ ಸಂಸ್ಥೆಗೆ ಮೊರೆ ಹೋಗಿತ್ತು. ಇದಕ್ಕೆ ಸ್ಪಂದಿಸಿದ ಸಂಸ್ಥೆಯ ಮುಖ್ಯಸ್ಥ ಎನ್.ವಿನಯ್ ಹೆಗ್ಡೆ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ಬಸ್ ಪ್ರತಿದಿನ ಬೆಳಗ್ಗೆ ಹರೇಕಳ, ಪಾವೂರು ಮತ್ತು ಆಸುಪಾಸಿನ ಗ್ರಾಮದ ಮಕ್ಕಳನ್ನು ಶಾಲೆಗೆ ಕರೆತಂದು ಸಂಜೆ ಅದೇ ಜಾಗಕ್ಕೆ ತಲುಪಿಸುತ್ತದೆ. ಈ ಬಸ್ಸಿನಿಂದಾಗಿ ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಿದ್ದು ಬಸ್ಸು ಪ್ರಯಾಣವೂ ಉಚಿತ. ಇದರಿಂದಾಗಿ ಮುಂದಿನ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ಉದ್ಘಾಟನಾ ಸಮಾರಂಭ

ಹರೇಕಳ ಶ್ರೀ ರಾಮಕೃಷ್ಣ ಪ್ರೌಡಶಾಲೆಯಲ್ಲಿ ಸೋಮವಾರ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು ಸ್ವಸಮೀಕ್ಷೆ ವಿಭಾಗಗಳ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಬಸ್ಸಿನ ವ್ಯವಸ್ಥೆಗೆ ಚಾಲನೆ ನೀಡಿದರು. ಶಾಲಾಡಳಿತ ಸಮಿತಿಯ ಕಾರ್ಯದರ್ಶಿ ರಾಜ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಕೊಣಾಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಧಾಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಪಡೆದ ವ್ಯಕ್ತಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಮಾಜಕ್ಕೆ ಆಧಾರಸ್ತಂಭವಾಗಿದ್ದು ಇವೆರಡೂ ಕ್ಷೇತ್ರಗಳಲ್ಲಿ ನಿಟ್ಟೆ ವಿವಿ ಮಹತ್ತರ ಕೊಡುಗೆ ನೀಡಿದೆ. ಕನ್ನಡ ಮಾಧ್ಯಮ ಶಾಲೆಯ ಉಳಿವಿಗಾಗಿ ಏಳು ಬಸ್‌ಗಳನ್ನು ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದೆ. ಪ್ರೊ.ಸತೀಶ್ ಕುಮಾರ್ ಭಂಡಾರಿ ಉಪಾಧ್ಯಕ್ಷ, ನಿಟ್ಟೆ ವಿವಿ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು ಸ್ವಸಮೀಕ್ಷೆ ವಿಭಾಗ ಅನುದಾನಿತ ಶಾಲೆಗಳು ಶಿಕ್ಷಕರ ಕೊರತೆಯಿಂದ ಬಳಲುತ್ತಿದ್ದು ಹಲವಾರು ಶಾಲೆಗಳು ಮುಚ್ಚುತ್ತಿವೆ. ಶತಮಾನಗಳನ್ನು ಕಂಡಿರುವ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆ ಅನುಭವಿಸುತ್ತಿವೆ. ಇಂತಹ ಸಂದರ್ಭ ನಿಟ್ಟೆ ಎಜುಕೇಶನ್ ಟ್ರಸ್ಟ್, ನಮ್ಮ ಶಾಲೆಗೆ ಉಚಿತವಾಗಿ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದು ಊರಿನವರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಕೆ.ಎನ್.ಆಳ್ವ ಅಧ್ಯಕ್ಷ, ಶಾಲಾ ಆಡಳಿತ ಮಂಡಳಿ https://www.vijayavani.net/villagers-fear-epidemic-disease https://www.vijayavani.net/locals-demand-construction-of-bridge

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net