

ಕಡಬ: ಕಣ್ಣಿನ ಆರೋಗ್ಯ ಕಾಪಾಡುವುದು ಅತ್ಯಂತ ಮಹತ್ವ, ವಯೋಸಹಜವಾಗಿ ಕಣ್ಣಿನಲ್ಲಿ ದೋಷ ಕಾಣಿಸಿಕೊಳ್ಳುವುದು ಸಾಮಾನ್ಯ, ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ನುರಿತ ವೈದ್ಯಾಧಿಕಾರಿಗಳನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಸಲಹೆ ನೀಡಿದರು.
ರಾಮಕುಂಜ ಗ್ರಾಪಂ, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರ, ಪುತ್ತೂರು ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಪುತ್ತೂರು, ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು, ಡಾ.ಪಿ.ದಯಾನಂದ ಪೈ ಹಾಗೂ ಸತೀಶ್ ಪೈ ಚಾರಿಟೆಬಲ್ ಟ್ರಸ್ಟ್, ಸೆಂಚುರಿ ಗ್ರೂಪ್ ಬೆಂಗಳೂರು ಆಶ್ರಯದಲ್ಲಿ ರಾಮಕುಂಜ ಗ್ರಾಪಂ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಮಕುಂಜ ಗ್ರಾಪಂ ಅಧ್ಯಕ್ಷೆ ಸುಚೇತಾ ಬಿ.ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೋಹನಕುಮಾರ ಜಿ.ಉಪಸ್ಥಿತರಿದ್ದರು. ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಅಗತ್ಯ ಉಳ್ಳವರಿಗೆ ಉಚಿತ ಕಣ್ಣಿನ ಪೊರೆ ಚಿಕಿತ್ಸೆ, ರಿಯಾಯಿತಿ ದರದಲ್ಲಿ ಕನ್ನಡಕಗಳ ವಿತರಣೆ ಮಾಡಲಾಯಿತು. 100 ಜನ ಶಿಬಿರದ ಪ್ರಯೋಜನ ಪಡೆದುಕೊಂಡರು.