ಮಾಡೆಲಿಂಗ್ ಆಮಿಷವೊಡ್ಡಿ ಊರೆಲ್ಲ ಸುತ್ತಾಡಿಸಿದ ವಂಚಕಿ ಕೊನೆಗೆ ರೂಪದರ್ಶಿಗೆ ಕೊಟ್ಟಳು ಶಾಕ್​!

Modeling
Published on

ಬೆಂಗಳೂರು: ಮಾಡೆಲಿಂಗ್ ಕೆಲಸ ಮಾಡಿಸುವುದಾಗಿ ರೂಪದರ್ಶಿಯನ್ನು ಎಲ್ಲೆಡೆ ಸುತ್ತಾಡಿಸಿ 3 ಲಕ್ಷ ರೂ. ಮತ್ತು ಮೊಬೈಲ್ ದೋಚಿ ವಂಚಕಿ ಪರಾರಿ ಆಗಿದ್ದಾಳೆ. ಮುಂಬೈ ಮೂಲದ 29 ವರ್ಷದ ರೂಪದರ್ಶಿ ವಂಚನೆಗೆ ಒಳಗಾದವರು. ಈಕೆ ಕೊಟ್ಟ ದೂರಿನ ಮೇರೆಗೆ ವಂಚಕಿ ಸುಫಿಯಾ ಎಂಬಾಕೆ ವಿರುದ್ಧ ಎ್ಐಆರ್ ದಾಖಲಿಸಿ ಬ್ಯಾಟರಾಯನಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಠಲ್ ಮಲ್ಯ ರಸ್ತೆ ರಮಶ್ರೀ ಹೋಟೆಲ್‌ನಲ್ಲಿ ನೆಲೆಸಿದ್ದ ರೂಪದರ್ಶಿ, ಕರೊನಾ ಲಾಕ್‌ಡೌನ್‌ನಲ್ಲಿ ಕೆಲಸ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಳು. ಈ ವೇಳೆ ಪರಿಚಯವಾದ ಸುಫಿಯಾ ಅಲಿಯಾಸ್ ಮಾಯಾ, ಮಾಡೆಲಿಂಗ್ ಜತೆಗೆ ಉಳಿದುಕೊಳ್ಳಲು ಹೋಟೆಲ್ ರೂಂ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾಳೆ. ಇದನ್ನು ನಂಬಿದಿ ರೂಪದರ್ಶಿ, ಹೋಟೆಲ್ ಖಾಲಿ ಮಾಡಿಕೊಂಡು ಕ್ಯಾಬ್‌ನಲ್ಲಿ ಸದ್ದುಗುಂಟೆಪಾಳ್ಯಕ್ಕೆ ತೆರಳಿ ಸುಫಿಯಾಳನ್ನು ಭೇಟಿ ಮಾಡಿದ್ದಾಳೆ. ಆಕೆ, ತನ್ನ ಕಾರಿನಲ್ಲಿ ಹತ್ತಿಸಿಕೊಂಡ ವಂಚಕಿ, ರೂಪದರ್ಶಿಯನ್ನು ಎಲ್ಲೆಡೆ ಸುತ್ತಾಡಿಸಿದ್ದಾಳೆ. ತನ್ನ ಬಳಿ ಇರುವ 3 ಲಕ್ಷ ರೂ. ಅನ್ನು ಅಮ್ಮನ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗಿದೆ. ಎಲ್ಲಾದರೂ ಎಟಿಎಂ ಬೂತ್ ಇದ್ದರೇ ಹೇಳಿ ಎಂದು ಮಾಡೆಲ್ ಸಹಾಯ ಕೋರಿದ್ದಾಳೆ. ಅದಕ್ಕೆ ವಂಚಕಿ, ಊಟ ಮಾಡಿದ ಬಳಿಕ ಹೋಗೋಣ ಎಂದು ಹೇಳಿ ರಾತ್ರಿ 8 ಗಂಟೆಯಲ್ಲಿ ಹೋಟೆಲ್‌ನಲ್ಲಿ ಊಟ ಕೊಡಿಸಿದ್ದಾಳೆ. ಇದಾದ ಮೇಲೆ ಮತ್ತೆ ಕೇಳಿದಾಗ ಮಲಗಲು ಮನೆಗೆ ಹೋಗುವ ದಾರಿಯಲ್ಲಿ ಡಿಪಾಸಿಟ್ ಮಾಡೋಣ ಎಂದು ಹೇಳಿ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಗೆ ಕರೆದುಕೊಂಡು ಬಂದಿದ್ದಾಳೆ.

ತಡರಾತ್ರಿ 2 ಗಂಟೆಯಲ್ಲಿ ಕಾರು ನಿಲ್ಲಿಸಿ ಡಿಕ್ಕಿಯಲ್ಲಿ ಬ್ಲಾಂಕೆಟ್ ಇದೆ. ತೆಗೆದುಕೊಂಡು ಬರುವಂತೆ ಕೇಳಗೆ ಇಳಿಸಿದ್ದಾಳೆ. ಇತ್ತ ರೂಪದರ್ಶಿ ತನ್ನ ಬಳಿಯಿದ್ದ ಹಣ, ಮೊಬೈಲ್ ಬ್ಯಾಗ್ ಅನ್ನು ಕಾರಿನಲ್ಲಿಯೇ ಬಿಟ್ಟು ಕೆಳಗೆ ಇಳಿದು ಹಿಂದೆ ಹೋಗುತ್ತಿದಂತೆ ಕಾರ್ ಆನ್ ಮಾಡಿಕೊಂಡು ಸುಫಿಯಾ ಅಲ್ಲಿಂದ ಪರಾರಿಯಾಗಿದ್ದಾಳೆ. ದಿಕ್ಕು ತೋಚದ ರೂಪದರ್ಶಿ, ಎಲ್ಲೆಡೆ ಸುತ್ತಾಡಿ ಕೊನೆಗೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net