ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಅಧಿಕ ಲಾಭದ ಆಮಿಷ 76.32 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭಗಳಿಸುವ ಬಗ್ಗೆ ಟೆಲಿಗ್ರಾಂನಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 76,32,145 ರೂ. ಕಳೆದುಕೊಂಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ಟೆಲಿಗ್ರಾಂನಲ್ಲಿ ಸಾಗರಿಕಾ ಅಗರ್‌ವಾಲ್ ಎಂಬವಳ ಪರಿಚಯವಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭಗಳಿಸುವ ಬಗ್ಗೆ ತಿಳಿಸಿದ್ದಾಳೆ. ಬಳಿಕ ವಾಟ್ಸಾಪ್ ಸಂದೇಶಗಳ ಮೂಲಕ ಲಿಂಕ್ ಕಳುಹಿಸಿ ಲಾಗಿನ್ ಕ್ರಿಯೇಟ್ ಮಾಡಿದ್ದು, ಮೊದಲಿಗೆ 27,600 ರೂ. ಹೂಡಿಕೆ ಮಾಡಿದ್ದಾರೆ. ಅದೇ ತಿಂಗಳಲ್ಲಿ ಅಲ್ಪ ಲಾಭಾಂಶ ನೀಡಿ ಹಣವನ್ನು ಹಿಂಪಡೆದಿದ್ದಾರೆ. ಬಳಿಕ ವಂಚಕರು ಅಧಿಕ ಲಾಭದ ಆಮಿಷವೊಡ್ಡಿ ಹಂತ ಹಂತವಾಗಿ ಮಾ.11ರ ವರೆಗೆ 76,32,145 ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಲಾಭಾಂಶ 1,36,00,000ರೂ. ತಲುಪಿದಾಗ ಲಾಭಾಂಶವನ್ನು ಸಮೇತ ಹಣ ಹಿಂದಿರುಗಿಸುವಂತೆ ಕೇಳಿಕೊಂಡಿದ್ದು, ಆದರೆ ಹಣ ವಾಪಾಸು ನೀಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಅಕ್ರಮವಾಗಿ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net